ಶಿವಸೇನೆ, ಎಂಇಎಸ್ ಗೆ ಎಚ್ಚರಿಕೆ ನೀಡಿದ ಚಂದ್ರಪ್ಪ

ಬೆಳಗಾವಿ: ಬೆಳಗಾವಿಯಲ್ಲಿ ಪದೇ ಪದೇ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಬಾಲ‌ ಮುಚ್ಚಿಕೊಂಡಿದ್ದರೆ ಒಳ್ಳೆಯದು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಎಚ್ಚರಿಕೆ ನೀಡಿದರು.

promotions

ಸೋಮವಾರ ನಗರದ ಕನ್ನಡ ಸಾಹಿತ್ಯ‌ ಭವನದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು, ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

promotions

ಪುಂಡ ಶಿವಸೇನೆಯ ಮುಖಂಡನೊಬ್ಬ ಇತ್ತೀಚೆಗೆ ಕನ್ನಡ ಶಾಲು ಹಾಕಿದರೆ ಹೊಡೆಯುತ್ತೇನೆ ಎಂದು ಹೇಳಿದ್ದ, ನಿಮಗೆ ತಾಕತ್ತಿದ್ದರೆ ಕನ್ನಡಿಗರನ್ನು ಮುಟ್ಟಿನೋಡಿ ನಿಮಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.

ಬಿ. ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಕಳೆದ ಅಕ್ಟೋಬರ್ ನಲ್ಲಿ ಪ್ರಾರಂಭವಾಯಿತು. ಇದರಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಹತ್ತಾರು ವರ್ಷದಿಂದ ಕನ್ನಡ ಪರ ಹೋರಾಟ, ಜನಪರ ಕಾಳಜಿ ಹೊಂದಿದವರು ಈ ವೇದಿಕೆಯ ಸಂಘಟನೆಯಲ್ಲಿದ್ದಾರೆ ಎಂದರು.

ಈಗಾಗಲೇ ನಾವು 17 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ. ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ. ರೈತರು, ಮಹಿಳೆಯರು, ವಿಶೇವಾಗಿ ಭಾಷೆ ಸಮಸ್ಯೆ ಬಂದಾಗ ಕನ್ನಡಿಗರಿಗೆ ಅನ್ಯಾಯ ಮಾಡಿದಾಗ ಸಮರ್ಥ ಹೋರಾಟ ಮಾಡುವ ಕಾರ್ಯ ಜನಪರ ವೇದಿಕೆಯ ಕಾರ್ಯಕರ್ತರು ಮಾಡಬೇಕಿದೆ ಎಂದು ಕರೆ ನೀಡಿದರು.

ಜಯ ಕರ್ನಾಟಕ ಜನಪರ ವೇದಿಕೆ ಯಾವುದೇ ಜಾತಿ, ಭಾಷೆ, ಧರ್ಮಕ್ಕೆ ಸೀಮಿತವಾಗಿಲ್ಲ. ಸಮಸ್ತ ಕನ್ನಡಗರ ವೇದಿಕೆ. ನಮ್ಮ ಸಂಘಟನೆಯಲ್ಲಿ ಎಲ್ಲ ಜಾತಿಯ ಜನರು ಇದ್ದಾರೆ. ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರಿಗೂ ಸ್ಥಾನ ಮಾನ ನೀಡಿದ ಸಂಘಟನೆ ಎಂದರೆ ನಮ್ಮ ಸಂಘಟನೆ ಎಂದರು.

ಬೆಳಗಾವಿಯಲ್ಲಿ ಕನ್ನಡ ಪರ, ಜನಪರ ಕಳಕಳಿ ಇರುವ ವ್ಯಕ್ತಿ ಶಿವರಡ್ಡಿ ಹುಚ್ವರಡ್ಡಿ ಅವರನ್ನು ಜಯ ಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡಿ ವೇದಿಕೆ ಧ್ವಜ ನೀಡಿದರು.

ಜಯಕರ್ನಾಟಕ ಜನಪರ ವೇದಿಕೆಯ ಸಂಘಟನೆಯನ್ನು ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೆಳೆಸಬೇಕು. ಕನ್ನಡ ಹೋರಾಟಕ್ಕೆ ಮಂಚೂಣಿಯಲ್ಲಿ ನಿಲ್ಲಬೇಕೆಂದು ಕರೆ ನೀಡಿದರು.

ಜಯ ಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚ್ಚರಡ್ಡಿ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ವೇದಿಕೆಯ ಜವಾಬ್ದಾರಿ ನೀಡಿರುವುದು ಸಂತಸದ ಸಂಗತಿ. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡದ ಸಲುವಾಗಿ ಹೋರಾಟ ಮಾಡುವುದರ ಜತೆಗೆ ಬಡವ, ದೀನ ದಲಿತರ ಮಾಶಾಸನವನ್ನು ನೀಡಲು ಸರಕಾರ ಹಿಂದೆಟ್ಟು ಹಾಕುತ್ತಿವೆ. ಅದನ್ನು ಪ್ರಮಾಣಿಕವಾಗಿ ಅವರಿಗೆ ಕೊಡಿಸುವ ಕೆಲಸ ನಮ್ಮ ವೇದಿಕೆಯ ಮೂಲಕ ಮಾಡಕೊಡಲಾಗುವುದು ಎಂದರು.

ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್, ಶಿವಸೇನೆಯನ್ನು ಬಗ್ಗು ಬಡಿಯಲು ಶೀಘ್ರದಲ್ಲಿಯೇ ಬೃಹತ್ ಸಮಾವೇಶ ಮಾಡಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.

ಜಯ ಕರ್ನಾಟಕ ಜನಪರ ವೇದಿಕೆಯ ಉಪಾಧ್ಯಕ್ಷ ಮುತ್ತಪ್ಪ ಬೆಳಕ್ಕಿ, ಕಾರ್ಯಾಧ್ಯಕ್ಷ ಅಣ್ಣಪ್ಪ ಓಲೇಕಾರ, , ರಾಜ್ಯ ಸಮಿತಿ ಸದಸ್ಯ ಎನ್.ರಾಘವೇಂದ್ರ, ಮಲ್ಲಿಕಾರ್ಜುನ, ಹನುಮಂತ ಕೊಪ್ಪದ, ಶೈಲಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles