ಬೆಳಗಾವಿ ಲೋಕಸಭಾ ಕ್ಷೇತ್ರ ಏನು ? ಎತ್ತ ? ಹೇಗೆ ? ಲೋಕಲ್ ವಿವ್ಯೂ ವಿಶೇಷ
- 15 Jan 2024 , 12:42 AM
- Belagavi
- 203
ಬೆಳಗಾವಿ: ಲೋಕಸಭೆ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿ, ಚುನಾವಣಾ ಪ್ರಚಾರದ ಮಗ್ನವಾಗಿದ್ದಾರೆ. ಇತ್ತ ಎರಡು ರಾಷ್ಟ್ರೀಯ ಪಕ್ಷದ ಘಟಾನುಘಟಿ ನಾಯಕರು ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಸ್ವತಂತ್ರ ನಂತರದಲ್ಲಿ ಸಧ್ಯ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ 18ನೇ ಚುನಾವಣೆ ನಡೆಯುತ್ತಿದೆ.


ಅಂತೆಯೇ 2ನೇ ಬಾರಿಗೆ ಈ ಉಪ ಚುನಾವಣೆ ನಡೆಯುತ್ತಿದೆ. ಸತತವಾಗಿ ನಾಲ್ಕು ಬಾರಿ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿರುವುದೆ ಈ ಕ್ಷೇತ್ರದ ಹೆಗ್ಗಳಿಕೆ ಇದೆ. ಈ ಹಿಂದೆ ಎಸ್ ಬಿ ಸಿದ್ನಾಳ್ 1980 ರಿಂದ 1996 ವರೆಗೆ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ತದನಂತರ ದಿ. ಸುರೇಶ್ ಅಂಗಡಿ 2004 ರಿಂದ 2020 ರ ವರೆಗೆ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸಿದ್ನಾಳ್ ಅವರ ಸಾಧನೆಗೆ ಸಮಬಲ ಸಾಧಿಸಿದ್ದರು.


ಆದರೆ ಕಳೆದ ವರ್ಷ ಮಹಾಮಾರಿ ಕೊರೋನಾ ಆರ್ಭಟದ ಸಂದರ್ಭದಲ್ಲಿ ಸುರೇಶ್ ಅಂಗಡಿ ಅಕಾಲಿಕ ಮರಣಹೊಂದಿದರು. 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇದೇ ವರ್ಷದ ಜ.18ರ ಅಂತಿಮ ಮತದಾರರ ಪಟ್ಟಿ ಪ್ರಕಾರ 9,08,103 ಪುರುಷ , 8,99,091 ಮಹಿಳೆಯರು, 56 ಇತರೆ ಸೇರಿ 18,07,250 ಮತದಾರರು ಇದ್ದಾರೆ.

22,461 ಯುವ ಮತದಾರರು. 7,925 ಮಂದಿ ಸೇವಾ ಮತದಾರರಿದ್ದಾರೆ. 12,290 ಅಂಗವಿಕಲರಿದ್ದಾರೆ. ಒಟ್ಟು 329 ಮಂದಿ ವಿಐಪಿ ಮತದಾರರಾಗಿದ್ದಾರೆ. ಬಿಜೆಪಿಯಿಂದ ಸುರೇಶ ಅಂಗಡಿ ಪತ್ನಿ ಮಂಗಲಾ ಅಂಗಡಿ ಕಾಂಗ್ರೇಸನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಸಿ ಅಖಾಡದಲ್ಲಿ ದುಮುಕ್ಕಿದ್ದಾರೆ. ಜೊತೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರ ಪೈಪೋಟಿ ಇರುವುದರಿಂದ ಭಾರಿ ಕುತೂಹಲ ಈ ಲೋಕಸಭಾ ಚುನಾವಣೆ ಮೂಡಿಸಿದೆ.

ಸಿಡಿ ಕಿಡಿ ಬೆಳಗಾವಿಯಲ್ಲಿ ಅಸ್ತ್ರವಾಗುತ್ತಾ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯ ರಾಜಕಾರಣದ ಚಿತ್ರಣವನ್ನೇ ಬದಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಿಡಿ ಪ್ರಕರಣವನ್ನೇ ಪ್ರಮುಖ ಅಸ್ತ್ರ ವಾಗಿಟ್ಟುಕೊಂಡು ಚುನಾವಣೆ ಎದುರಿಸುವ ಮೂಲಕ 20 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲಿದೆ ಎನ್ನುವ ಮಾತು ಪ್ರಬಲವಾಗಿ ಕುಂದಾನಗರಿ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಚನ್ನಮ್ಮನ ಆಸ್ಥಾನದಲ್ಲಿ ಮೊದಲ ಬಾರಿಗೆ ಮಹಿಳೆಗೆ ಸಿಗುತ್ತಾ ಅವಕಾಶ?
ಈ ತರಹದ್ದೊಂದು ಚರ್ಚೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಏಕೆಂದರೆ ಇದುವರೆಗೂ ಯಾರು ಒಬ್ಬ ಮಹಿಳೆಯೂ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗದಿರುವುದೇ ಈ ತರದೊಂದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. 2014 ರ ಚುನಾವಣೆಯಲ್ಲಿ ಸದ್ಯ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.

ಪ್ರಸಕ್ತ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಹಿಳಾ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಬೇಕು ಎಂದು ಮಹಿಳೆಯರ ಒತ್ತಾಯದ ನಡುವೆ ಬಿಜೆಪಿ ದಿ.ಸುರೇಶ ಅಂಗಡಿ ಪತ್ನಿ ಮಂಗಲಾ ಅಂಗಡಿಗೆ ಮಣೆ ಹಾಕುವ ಮೂಲಕ ಕಿತ್ತೂರು ಚನ್ನಮ್ಮನ ನಾಡಿನ ಮೊದಲ ಮಹಿಳೆಗೆ ಪಾರ್ಲಿಮೆಂಟ್ ನಲ್ಲಿ ಅವಕಾಶ ಸಿಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೇಸ ನಡುವೆ ನೇರ ಪೈಪೋಟಿ ನಡೆಯುವುದರಿಂದ ಎರಡು ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಗಳೇ ಕಣಕ್ಕಿಳಿದ್ದಿದ್ದಾರೆ. ಈ ಬೆಳಗಾವಿ ಲೋಕಸಭಾ ಚುನಾವಣೆಯ ಮೇಲೆ ಎಲ್ಲರ ಕಣ್ಣು ಬಿದಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.










