ಸಾರಿಗೆ ಸಂಸ್ಥೆ ನೌಕರರಿಂದ ಮುಷ್ಕರಕ್ಕೆ ಕರೆ: ಪರ್ಯಾಯ ಸಾರಿಗೆ ಸೌಲಭ್ಯ ಒದಗಿಸಲು ಕ್ರಮ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್
- 15 Jan 2024 , 2:46 AM
- Belagavi
- 150
ಬೆಳಗಾವಿ:ಸಾರಿಗೆ ಸಂಸ್ಥೆಯ ನೌಕರರು ಏ.7 ರಿಂದ ಅನಿರ್ದಿಷ್ಟ ಅವಧಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ ನಡೆದ ವಿವಿಧ ವರ್ಗಗಳ ವಾಹನಗಳ ಪ್ರವರ್ತಕರ ಸಂಘದ ಪ್ರತಿನಿಧಿಗಳು ಹಾಗೂ ಪ್ರವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರಿಗೆ ಸಂಸ್ಥೆಯ ನೌಕರರು ಒಂದು ವೇಳೆ ಮುಷ್ಕರ ಆರಂಭಿಸಿದರೆ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಖಾಸಗಿ ಪ್ರವರ್ತಕರಿಗೆ ಕೆಲ ಮಾರ್ಗಗಳಲ್ಲಿ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ತಾತ್ಕಾಲಿಕ ಪರ್ಮಿಟ್ ಗಳನ್ನು ನೀಡಲು ನಿರ್ಧರಿಸಲಾಗಿದೆ.

ಖಾಸಗಿ ಬಸ್ ಗಳು, ಮ್ಯಾಕ್ಸಿ ಕ್ಯಾಬ್ ಗಳಿಗೆ ಏ.7 ರಿಂದ ಈ ರೀತಿಯ ತಾತ್ಕಾಲಿಕ ಪರ್ಮಿಟ್ ಗಳನ್ನು ನೀಡಬಹುದಾಗಿದೆ. ಬಸ್, ಮ್ಯಾಕ್ಸಿ ಕ್ಯಾಬ್ ಅಲ್ಲದೇ ಅಗತ್ಯಬಿದ್ದರೆ ಇನ್ನಿತರ ವಾಹನಗಳಿಗೂ ಪರ್ಮಿಟ್ ನೀಡಿ ಸಾರ್ವಜನಿಕರ ಅನುಕೂಲಕ್ಕೆ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಯಾಣಿಕರಶೋಷಣೆ; ಕಠಿಣಕ್ರಮದಎಚ್ಚರಿಕೆ: ರಾಜ್ಯ ಸಾರಿಗೆ ನೌಕರರ ಒಕ್ಕೂಟ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಸಂದರ್ಭದಲ್ಲಿ ಇತರೆ ಖಾಸಗಿ ಪ್ರವರ್ತಕರು, ಸಾರಿಗೆ ಸಂಸ್ಥೆಯವರು ಅತೀ ಹೆಚ್ಚು ದರ ಆಕರಿಸುವ ಮೂಲಕ ಪ್ರಯಾಣಿಕರ ಶೋಷಣೆ ಮಾಡಿದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಎಚ್ಚರಿಕೆ ನೀಡಿದರು.
ಮುಷ್ಕರ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲ ಖಾಸಗಿ ಸಾರಿಗೆ ಪ್ರವರ್ತಕರು ಸಹಕರಿಸಬೇಕು ಎಂದು ಮನವಿಯನ್ನು ಕೂಡ ಅವರು ಮಾಡಿಕೊಂಡರು. ಮುಷ್ಕರ ಸಂದರ್ಭದಲ್ಲಿ ಜಿಲ್ಲಾಡಳಿತ ಅಥವಾ ಸರ್ಕಾರದ ನಿರ್ದೇಶನಗಳ ಪ್ರಕಾರ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪ್ರವರ್ತಕರು ಭರವಸೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ವಾಯವ್ಯ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಂ, ಚಿಕ್ಕೋಡಿ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ, ಬೈಲಹೊಂಗಲ ಎ.ಆರ್.ಟಿ.ಓ. ನಾಗೇಶ್ ಮುಂಡಾಸ, ರಾಮದುರ್ಗ ಎ.ಆರ್.ಟಿ.ಓ ಧರ್ಮರಾಜ್ ಪವಾರ್, ಗೋಕಾಕ ಎ.ಆರ್.ಟಿ.ಓ ಹೇಮಾವತಿ, ನಾಗರಿಕ ವೇದಿಕೆ ಅಧ್ಯಕ್ಷ ವಿಕಾಸ್ ಕಲಘಟಗಿ ಹಾಗೂ ವಿವಿಧ ಖಾಸಗಿ ಸಾರಿಗೆ ಸಂಸ್ಥೆಗಳ ಪ್ರವರ್ತಕರು ಸಭೆಯಲ್ಲಿ ಪಾಲ್ಗೊಂಡಿದ್ದರು.










