ಕೇಂದ್ರದಲ್ಲಿರುವುದು ಹಮ್ ದೋ, ಹಮಾರೆ ದೋ ಆಡಳಿತ: ಸತೀಶ ಜಾರಕಿಹೊಳಿ ವ್ಯಂಗ್ಯ

ಬೆಳಗಾವಿ: ಕೇಂದ್ರದಲ್ಲಿರುವುದು ಹಮ್ ದೋ, ಹಮಾರೇ ದೋ ಸರ್ಕಾರವಾಗಿದೆ. ಕೇಂದ್ರ ಸರ್ಕಾರ ಕೇವಲ ಇಬ್ಬರಿಗಾಗಿ ಆಡಳಿತ ನಡೆಸುತ್ತಿದೆ" ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು. ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಮಚ್ಚೆಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.

promotions

ಮೋದಿ ಹಾಗೂ ಅಮಿತ್ ಶಾ ಇಬ್ಬರಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಎಣ್ಣೆ, ಪೆಟ್ರೋಲ್ ಮಾರಾಟ, ಏರಪೋರ್ಟ್ ನಿರ್ವಹಣೆ ಸೇರಿ ಎಲ್ಲವನ್ನು ಅವರೇ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ರೈಲ್ವೆ ಇಲಾಖೆಯನ್ನೂ ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ.

promotions

ಇನ್ನು ಮುಂದೆ ದೇಶದಲ್ಲಿ ಅದಾನಿಯ ರೈಲುಗಳು ಮಾತ್ರ ಓಡಾಡಲಿವೆ" ಎಂದು ಆರೋಪಿಸಿದರು. ಸರ್ಕಾರಗಳಿರುವುದು ಯಾರದ್ದೊ ಇಬ್ಬರ ಹಿತಕ್ಕಾಗಿ ಅಲ್ಲ, ಸರ್ಕಾರಗಳಿರುವುದು ಜನರ ರಕ್ಷಣೆಗಾಗಿ. ಬಿಜೆಪಿ ಸರ್ಕಾರ ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಜನವಿರೋಧಿ ಸರ್ಕಾರವನ್ನು ನಿಯಂತ್ರಿಸಲು ಜನರಿಗೆ ಉಪಚುನಾವಣೆ ಉತ್ತಮ ಅವಕಾಶವಾಗಿದೆ.

ಸದಾ ಜನಪರವಾಗಿರುವ ಕಾಂಗ್ರೆಸ್ ಗೆ ಜನರು ಮತದಾನ ಮಾಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಬೇಕು" ಎಂದು ಮನವಿ ಮಾಡಿದರು. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದಲ್ಲಿ 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅನೇಕ ಜನರಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ, ಇಂದಿನ ರಾಜ್ಯ ಸರ್ಕಾರ ಆ ಯೋಜನೆಗಳನ್ನು ಮೊಟಕುಗೊಳಿಸುತ್ತಿದೆ. ಇದರ ವಿರುದ್ಧ ಜನರು ಜಾಗೃತರಾಗಬೇಕು. ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖಂಡರಾದ ರಮೇಶ ಗೋರಲ, ಕಾಕಾಸಾಬ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Read More Articles