ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಲಾಗುವುದು ಬೊಮ್ಮಾಯಿ
- 15 Jan 2024 , 2:56 AM
- Bengaluru
- 136
ಬೆಂಗಳೂರು :ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ತರು ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಅವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದರು. ಬೆಡ್ ಹಂಚಿಕೆಯಲ್ಲಿನ ಅವ್ಯವಹಾರ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ದಕ್ಷಿಣ ವಲಯದ ಕೋವಿಡ್ ಬೆಡ್ ಹಂಚಿಕೆ ಬಗ್ಗೆ ತನಿಖೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ವಲಯಗಳಲ್ಲಿ ತನಿಖೆ ನಡೆಯಲಿದೆ ಈಗಾಗಲೇ ಇಬ್ಬರು ವೈದ್ಯರು, ಡೇಟಾ ಆಪರೇಟರ್ಸ್ ಸೇರಿದಂತೆ ಒಟ್ಟು 8 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಕೋವಿಡ್ ಪರಿಸ್ಥಿತಿಯಲ್ಲಿ ಅವ್ಯವಹಾರ ಮಾಡುವುದನ್ನು ನಾವು ಸಹಿಸುವುದಿಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಬೆಂಗಳೂರಿನಲ್ಲಿ ಆಸ್ಪತ್ರೆಗಳ ಹತ್ತಿರ ಇರುವ ಹೋಟೆಲ್ಗಳಲ್ಲಿ ಸುಮಾರು 4000 ರೂಂ ಗಳನ್ನು ಬುಕ್ ಮಾಡಲಾಗುವುದು.
ಇದರೊಂದಿಗೆ ತಕ್ಷಣಕ್ಕೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗಲಿದೆ ಎಂದು ಅವರು ಹೇಳಿದರು.
ನಮ್ಮ ದೃಷ್ಟಿಯಲ್ಲಿ ಕಮ್ಯುನಲ್ ಎಂಬುದು ಯಾವುದು ಇಲ್ಲ. ಅಪರಾಧಿ ಅಪರಾಧಿ ಅಷ್ಟೇ. ತಪ್ಪಿತಸ್ಥರನ್ನು ಪತ್ತೆ ಮಾಡುವುದು ನಮ್ಮ ಕೆಲಸ. ಅವರು ಯಾರೇ ಆಗಿರಲಿ.










