ಆಕ್ಸಿಜನ್, ರೆಮಿಡಿಸಿವಿರ್ ಒದಗಿಸಲು ಕ್ರಮ: ಉಸ್ತುವಾರಿ ಸಚಿವ ಕಾರಜೋಳ
- 15 Jan 2024 , 2:15 AM
- Belagavi
- 112
ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವಿರ್ ಒದಗಿಸುವುದರ ಜತೆಗೆ ಕೋವಿಡ್ ನಿಯಂತ್ರಣಕ್ಕೆ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂದಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಮಾರ್ಗಸೂಚಿ ಪಾಲಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಲಭ್ಯತೆ ಬಗ್ಗೆ ನಿರಂತರ ನಿಗಾ ವಹಿಸಬೇಕು. ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು.

ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ೨೪ ತಾಸು ಕೆಲಸ ಮಾಡಬೇಕು ವೈದ್ಯರು ಸ್ವತಃ ಕೋವಿಡ್ ವಾರ್ಡುಗಳಿಗೆ ಹೋಗಿ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಗೋಕಾಕ, ಸವದತ್ತಿ ಹಾಗೂ ಬೆಳಗಾವಿ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಸೋಂಕಿನ ಪ್ರಮಾಣ ದಿಢೀರ್ ಹೆಚ್ಚಳವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಸಚಿವರು, ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಗೆ ಅಗತ್ಯವಿರುವ ಪ್ರಯೋಗಾಲಯದ ಸ್ಥಾಪನೆಗೆ ಅಗತ್ಯವಿರುವ ಪ್ರಸ್ತಾವವನ್ನು ಕಳಿಸಿದರೆ ಇದಕ್ಕೆ ಸರಕಾರದ ಮಟ್ಟದಲ್ಲಿ ಮಂಜೂರಾತಿ ಒದಗಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಮೊದಲ ಲಸಿಕೆ ಪಡೆದುಕೊಂಡಿರುವವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ಲಸಿಕೆ ನೀಡಬೇಕು. ಲಸಿಕೆ ವ್ಯರ್ಥವಾಗದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ಬಿಮ್ಸ್ಗೆ ಇನ್ನೊಂದು ಆಕ್ಸಿಜನ್ ಘಟಕ- ಪ್ರಸ್ತಾವಕ್ಕೆ ಸೂಚನೆ:
ಬಿಮ್ಸ್ಗೆ ಇನ್ನೊಂದು ಆಕ್ಸಿಜನ್ ಸಂಗ್ರಹ ಘಟಕ ಸ್ಥಾಪಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಪ್ರಸ್ತಾವ ಸಲ್ಲಿಸಲು ತಿಳಿಸಿದರು. ಓ.ಎನ್.ಜಿ.ಸಿ ಆಕ್ಸಿಜೆನ್ ಘಟಕವನ್ನು ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸ್ಥಾಪಿಸಲು ಮನವಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸ್ಥಳ ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕೂಡಲೇ ಪತ್ರ ಬರೆಯುವಂತೆ ನಿರ್ದೇಶನ ನೀಡಿದರು. ಆಕ್ಸಿಜನ್ ಕೊರತೆಯಾಗದಂತೆ ಹೆಚ್ಚುವರಿ ಟ್ಯಾಂಕರ್ ಅಥವಾ ಚಾಲಕರನ್ನು ನಿಯೋಜಿಸಲು ಸೂಚನೆ ನೀಡಿದರು.
ಕೆಲವು ಕಡೆಗಳಲ್ಲಿ ರೋಗಿಗಳಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಆಕ್ಸಿಜನ್ ಬಳಕೆ ಮಾಡಲಾಗುತ್ತಿದೆ ಎಂದು ದೂರುಗಳಿವೆ. ಆದ್ದರಿಂದ ಈ ಬಗ್ಗೆ ಆಸ್ಪತ್ರೆಗಳಲ್ಲಿ ವೈದ್ಯರು ನಿಗಾ ವಹಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಬಿಮ್ಸ್ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು.
ವಾರ್ ರೂಮ್ ಚುರುಕುಗೊಳಿಸಲು ನಿರ್ದೇಶನ:
ಸೋಂಕಿತರಿಗೆ ತುರ್ತು ಚಿಕಿತ್ಸೆ ಮತ್ತು ಬೆಡ್ ಒದಗಿಸುವುದಕ್ಕೆ ಸಂಬಂದಿಸಿದಂತೆ ವಾರ್ ರೂಮ್ ನಲ್ಲಿ ಸಮರ್ಪಕವಾಗಿ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ವಾರ್ ರೂಮ್ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ ೧೦೨ ಆಂಬ್ಯುಲೆನ್ಸ್ ಗಳಿವೆ. ಇವುಗಳ ಸಂಚಾರದ ಮೇಲೆ ನಿಗಾವಹಿಸಬೇಕು. ಸದ್ಬಳಕೆ ಮಾಡಿಕೊಳ್ಳಲು ಕಡ್ಡಾಯವಾಗಿ ಲಾಗ್ ಬುಕ್ ನಿರ್ವಹಿಸಲು ತಿಳಿಸಿದರು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳ ಮಾಹಿತಿಯನ್ನು ಒದಗಿಸಲು ವೆಬ್ ಸೈಟ್ ಅಭಿವೃದ್ಧಿಪಡಿಸಲು ತಿಳಿಸಿದರು.
ಸಕ್ಕರೆ ಕಾರ್ಖಾನೆಗಳಿಂದ ಸಿಲಿಂಡರ್ ಬಳಕೆಗೆ ಸಲಹೆ:
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಕ್ಸಿಜನ್ ಸಿಲಿಂಡರ್ ಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕಲ್ಪಿಸಬೇಕು. ಪರಿಸ್ಥಿತಿ ಸುಧಾರಿಸಿದ ಬಳಿಕ ಆಯಾ ಕಾರ್ಖಾನೆಗಳಿಗೆ ಸಿಲಿಂಡರ್ ಗಳನ್ನು ಹಿಂದಿರುಗಿಸಬೇಕು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕಾರ ನೀಡಲಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಇಥೆನಾಲ್ ಘಟಕ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಆಕ್ಸಿಜನ್ ಉತ್ಪಾದಿಸಿ ಸರಬರಾಜು ಮಾಡುತ್ತಿವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. ಇನ್ನು ಕೆಲವು ದಿನಗಳಲ್ಲಿ ರೆಮಿಡಿಸಿವಿರ್ ಬೆಳಗಾವಿಯಲ್ಲಿ ಉತ್ಪಾದನೆ ಯಾಗಲಿದ್ದು, ಇದರಿಂದ ಕೊರತೆ ನೀಗಲಿದೆ ಎಂದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆಗೆ ತಕ್ಷಣವೇ ಕ್ರಮಕೈಗೊಳ್ಳುವಂತೆ ಹೇಳಿದರು.
ಸಹಾಯವಾಣಿ ಸಮರ್ಪಕವಾಗಿ ಬಳಸಬೇಕು. ಸಹಾಯ ಅಥವಾ ಮಾಹಿತಿ ಕೇಳುವ ಸಾರ್ವಜನಿಕರಿಗೆ ತಕ್ಷಣವೇ ಮಾಹಿತಿಯನ್ನು ಒದಗಿಸಬೇಕು. ಪ್ರತಿ ಕರೆಗಳಿಗೂ ಸೂಕ್ತ ಸ್ಪಂದನೆ ಇರಬೇಕು. ಕೆ.ಎಂ.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ೨೦೦ ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಇದರ ಪ್ರಯೋಜನ ಪಡೆಯುವಂತೆ ಸಚಿವರು ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸಂಬಂದಿಸಿದಂತೆ ಏನೇ ಅವಶ್ಯಕತೆಯಿದ್ದರೆ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ನಗರದ ಎಲ್ಲ ಪ್ರದೇಶದಲ್ಲಿ ಪ್ಯೂಮಿಗೇಷನ್ ಮಾಡುವಂತೆ ಸಂಸದೆ ಮಂಗಲಾ ಅಂಗಡಿ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಂಕಿನ ಪ್ರಮಾಣ ಸರಾಸರಿ ಶೇ.೨೦ -ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಸದ್ಯಕ್ಕೆ ಸರಾಸರಿ ಶೇ.೨೦ ರಷ್ಟಿದೆ. ಸರಕಾರದ ಮಾರ್ಗಸೂಚಿ ಪ್ರಕಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಸೋಮವಾರದಿಂದ ೩೬ ಗಂಟೆಗಳಲ್ಲಿ ಕೋವಿಡ್ ತಪಾಸಣಾ ವರದಿ ನೀಡಲು ಕ್ರಮಕೈಗೊಳ್ಳಲಾಗುವುದು. ಸದ್ಯಕ್ಕೆ ೩ ಸಾವಿರ ಮಾದರಿಯ ವರದಿ ನೀಡಬೇಕಿದೆ ಎಂದು ತಿಳಿಸಿದರು.
ಸರಕಾರದ ಆಸ್ಪತ್ರೆಗಳಿಗಿಂತ ಹೆಚ್ಚು ಜನರು ಖಾಸಗಿ ಆಸ್ಪತ್ರೆಗಳಲ್ಲಿದ್ದಾರೆ.
ಪೊಲೀಸರಿಗೆ ಶೇ.೧೦೦ ರಷ್ಟು ಲಸಿಕೆ ಒದಗಿಸಲು ಬೇಡಿಕೆಯಿದೆ. ಅದೇ ರೀತಿ ಮಾಧ್ಯಮ ಪ್ರತಿನಿಧಿಗಳಿಗೂ ಲಸಿಕೆ ನೀಡಬೇಕಿದೆ. ಜಿಲ್ಲೆಯಲ್ಲಿ ೫೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವುದರಿಂದ ಹೆಚ್ಚಿನ ಲಸಿಕೆ ಪೂರೈಸುವ ಅಗತ್ಯವಿದೆ. ಜಿಲ್ಲೆಯ ಸರಕಾರಿ- ಖಾಸಗಿ ಆಸ್ಪತ್ರೆಗಳಲ್ಲಿ ೧೩೪೩ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ೨೭೦ ಜನರು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಚೆನ್ನಾಗಿದ್ದು, ಹೆಚ್ಚಿನ ಪ್ರಮಾಣದ ಪೂರೈಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಐಜಿಪಿ ರಾಘವೇಂದ್ರ ಸುಹಾಸ್, ಬೆಳಗಾವಿ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ್, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.










