ಜಿಲ್ಲಾ ಉಸ್ತುವಾರಿ ಸಚಿವರು ಸರ್ವಪಕ್ಷ ಸಭೆ ಕರೆಯಲಿ; ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ

ಬೆಳಗಾವಿ: ಲಾಕ್ ಡೌನ್ ನಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ, ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರವೂ ಬಡವರಿಗೆ ಪರಿಹಾರ ಕೊಡಬೇಕೆಂದು" ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ‌ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಕಾಂಗ್ರೆಸ್ ಶಾಸಕರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

promotions

"ಲಾಕ್ ಡೌನ್ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ,ಅಲ್ಲಿನ ಬಡವರಿಗೆ ತಕ್ಷಣ ನಾಲ್ಕು ಸಾವಿರ ರೂ. ಪರಿಹಾರ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಬಡವರಿಗೆ ಕನಿಷ್ಟ ಒಂದು ತಿಂಗಳ ಮಟ್ಟಿಗಾದರು ಪರಿಹಾರ ನೀಡಿದರೆ ಅನಕೂಲವಾಗುತ್ತದೆ" ಎಂದರು.

promotions

ಉಸ್ತುವಾರಿ ಸಚಿವರು ಸರ್ವಪಕ್ಷ ಸಭೆ ಕರೆಯಲಿ:

"ಆಕ್ಸಿಜನ್ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಬೆಳಗಾವಿಗೆ ಹೆಚ್ಚು ಆಕ್ಸಿಜನ್ ಹಾಗೂ ಲಸಿಕೆಗಳ ಅಗತ್ಯವಿದೆ. ಹೀಗಾಗಿ, ಜಿಲ್ಲಾ‌ ಉಸ್ತುವಾರಿ ಸಚಿವರು ಕೂಡಲೇ ಪಕ್ಷಾತೀತವಾಗಿ ಎಲ್ಲರ ಸಭೆ ಕರೆಯಬೇಕು. ನಾವು ಸರ್ಕಾರಕ್ಕೆ ಅಗತ್ಯ ಸಹಕಾರ ಕೊಡಲು ಸಿದ್ದರಿದ್ದೇವೆ" ಎಂದು ಹೇಳಿದರು.

ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದ್ದೇವೆ: "ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದೇ ಮತ್ತೇ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ, ಸಮಸ್ಯೆಗಳನ್ನು ಸರಿಪಡಿಸಲು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಲಾಗಿದೆ" ಎಂದರು. "ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಜಿಲ್ಲೆಯ ಜನರು ಕೂಡ ಕೈಜೋಡಿಸಬೇಕು" ಎಂದು ಮನವಿ ಮಾಡಿದರು.

"ಕೋವಿಡ್ ನಿಂದ ಮೃತಪಟ್ಟವರು ಹಾಗೂ ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರವಾಗುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ" ಎಂದು ಹೇಳಿದರು.

"ಬೆಳಗಾವಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್, ರೆಮ್ ಡಿಸಿವಿರ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಹೆಚ್ಚಿಗೆ ಪೂರೈಕೆ ಮಾಡುವಂತೆ ಸೂಚನೆ‌ ನೀಡಿದ್ದು, ಅವರು ತಕ್ಷಣ ಸರಿಪಡಿಸುತ್ತಾರೆ ಎನ್ನುವ ವಿಶ್ವಾಸ ಇದೆ" ಎಂದರು.

"ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದ್ದರೂ, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆಕ್ಸಿಜನ್ ಇರುವ ಕಡೆಯಿಂದ ಸದ್ಯ ಆಮದು ಮಾಡಿಕೊಳ್ಳುವುದು ಸೂಕ್ತ" ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

Read More Articles