ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟ ಶಿವಸೇನೆ ! ಗಡಿ ವಿಷಯ ಮುಂದಿಟ್ಟುಕೊಂಡು ಮರಾಠಿಗರನ್ನು ಮನವೋಲಿಸುವ ಪ್ರಯತ್ನ
- 15 Jan 2024 , 12:49 AM
- Belagavi
- 109
ಬೆಳಗಾವಿರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಮೇಲೆ ಕಣ್ಣೀಟ್ಟಿರುವ ಎಂಇಎಸ್ ಮತ್ತು ಮಹಾರಾಷ್ಟ್ರದ ಆಡಳಿತರೂಢ ಶಿವಸೇನೆ ಪಕ್ಷವು ಇದೀಗ ಗಡಿ ವಿಷಯ ಕೆದಕುವ ಮೂಲಕ ಮರಾಠಿಗರ ಮನವೋಲಿಸಲು ಪ್ರಯತ್ನಕ್ಕೆ ಕೈಹಾಕಿದೆ.

ಹೌದು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳ ಕೇಂದ್ರ ಬಿಂದುವಾಗಿರುವ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲವು ಸಾಧಿಸಿ ಆಡಳಿತ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಎಂಇಎಸ್ ಮತ್ತು ಶಿವಸೇನೆ ಕಸರತ್ತು ಆರಂಭಿಸಿವೆ. ಅಷ್ಟೇ ಅಲ್ಲದೆ ಇದಕ್ಕಾಗಿ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಆರ್ಥಿಕ, ರಾಜಕೀಯ ಸೇರಿ ಎಲ್ಲ ರೀತಿಯ ನೆರವು ನೀಡಲು ಸಹ ಮುಂದಾಗಿದೆ.

ಈಗಾಗಲೇ ಬೆಳಗಾವಿಯ ಎಂಇಎಸ್ ನಾಯಕರು ಗಡಿ ವಿಷಯ ಮುಂದಿಟ್ಟುಕೊಂಡು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜ.17 ಸಿಎಂ ಉದ್ಧವ್ ಠಾಕ್ರೆ ಅವರು ಗಡಿ ವಿಷಯ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಮರಾಠಿಗರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. 2001ರಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಎದುರು ಹಾಕಿಕೊಂಡು ಮೊದಲ ಬಾರಿಗೆ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಿ 9 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಬಳಿಕ ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಶಿವಸೇನೆ ಮತ್ತೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಲಿಲ್ಲ.
ಇದೀಗ ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಆಡಳಿತದಲ್ಲಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಗಡಿ ವಿಷಯ ಪ್ರಸ್ತಾಪಿಸಿ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ. ಆದರೆ, ಬೆಳಗಾವಿಯಲ್ಲಿನ ಎಂಇಎಸ್ ಮುಖಂಡರು ಶಿವಸೇನೆ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ಮಾಡಿದ್ದಾರೆ ಎಂದು ಪಾಲಿಕೆಯ ಮಾಜಿ ಸದಸ್ಯರು ತಿಳಿಸಿದ್ದಾರೆ.
2014ರಲ್ಲಿ ಪಾಲಿಕೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ 58 ಸದಸ್ಯರಲ್ಲಿ 32 ಎಂಇಎಸ್ ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಎಂಇಎಸ್ ಬೆಂಬಲಿತರೇ ನಾಲ್ಕು ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಆಗಿದ್ದರು. ಬಳಿಕ ಮೀಸಲಾತಿ ಬಲದಿಂದಾಗಿ ಕೊನೆಯ ಅವಧಿಯಲ್ಲಿ ಕನ್ನಡ ಭಾಷಿಕರು ಮೇಯರ್ ಆಗಿದ್ದರು.










