200 ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ನಿರ್ಧಾರ : ಸಚಿವ ಬಸವರಾಜ ಬೊಮ್ಮಾಯಿ

  • 15 Jan 2024 , 12:02 AM
  • Haveri
  • 107

ಹಾವೇರಿ : ಕೋಟಿ ವಿರುದ್ಧದ ಯುದ್ಧ ಗೆಲ್ಲಲು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಮೂಲ ಸೌಕರ್ಯ ಬಳಕೆ ಮಾಡಿಕೊಳ್ಳಲು ಹಾಗೂ ಹಾವೇರಿ ಜಿಲ್ಲೆಗೆ ೨೦೦ ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ನಿರ್ಧರಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ತಿಳಿಸಿದರು.

promotions

ಗುರುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ಮೂಲ ಸೌಕರ್ಯಗಳ ಸೃಜನೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇರುವ ಖಾಸಗಿ ಆಸ್ಪತ್ರೆಗಳ ಆಕ್ಸಿಜನ್ ಬೆಡ್, ವೆಂಟಿಲೇಟರ್, ಐಸಿಯು ಬಳಕೆ ಮಾಡಿಕೊಂಡು ಸೋಂಕಿತರ ಪ್ರಾಣ ಕಾಪಾಡಿ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

promotions

ಜಿಲ್ಲೆಯಲ್ಲಿ ಬುಧವಾರದ ವರೆಗೆ 1755 ಸಕ್ರಿಯ ಪ್ರಕರಣಗಳಿಗೆ. ಜಿಲ್ಲಾ ಆಸ್ಪತ್ರೆಯಲ್ಲಿ 110, ತಾಲೂಕಾ ಆಸ್ಪತ್ರೆಗಳಲ್ಲಿ 221, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 321, ಖಾಸಗಿ ಆಸ್ಪತ್ರೆಯಲ್ಲಿ 50 ಹಾಗೂ ಹೊರ ಜಿಲ್ಲೆಗಳಲ್ಲಿ 40 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 1040 ಜನ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದರು. ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ದಿನವೊಂದಕ್ಕೆ ಏಳು ಮೆಟ್ರಿಕ್ ಟನ್ ಆಮ್ಲಜನ್ ಅವಶ್ಯಕತೆ ಇದೆ. ಬೇರೆ ಬೇರೆ ಮೂಲಗಳಿಂದ ಏಳು ಮೆಟ್ರಿಕ್ ಟನ್ ಪೂರೈಕೆಯಾಗುತ್ತಿದೆ. ನೆಕ್-ಟು-ನೆಕ್ ಸಮಪ್ರಮಾಣದಲ್ಲಿ ದಿನಕ್ಕೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತಿದ್ದು ಸದ್ಯಕ್ಕೆ ಆಮ್ಲಜನಕದ ಯಾವುದೇ ಕೊರತೆ ಇಲ್ಲ.

ಜಿಲ್ಲಾ ಆಸ್ಪತ್ರೆಗೆ ಬೇಕಾದ ಪ್ರಮಾಣದ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಆರು ಕೆ.ಎಲ್. ಮೆಡಿಕಲ್ ಆಕ್ಸಿಜನ್ ದಾಸ್ತಾನು ಪ್ಲಾಂಟ್ ಆಸ್ಪತ್ರೆ ಆವರಣದಲ್ಲಿದೆ. ಬೇರೆ ಬೇರೆ ಮೂಲಗಳಿಂದ ಜಿಲ್ಲಾ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗುತ್ತಿದೆ. 2.50 ಮೆ.ಟನ್ ಲಿಕ್ವಿಡ್ ಆಕ್ಸಿಜನ್, 1.50 ಕಂಟೇನರ್ ಮೂಲಕ ಹಾಗೂ 1.50 ಜಂಬೋ ಸಿಲೆಂಡರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಸದ್ಯ ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಿದರು. ಆಮ್ಲಜನಕದ ಪೂರೈಕೆ ಪ್ರಮಾಣ ಹೆಚ್ಚಳಮಾಡಲು ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಶೇಷ ಟ್ಯಾಂಕರ್ ವ್ಯವಸ್ಥೆಮಾಡಿ ಪ್ರತಿ ದಿನ ಮೂರು ಮೆಟ್ರಿಕ್ ಟನ್ ಆಕ್ಸಿಜನ್ ಹೆಚ್ಚುವರಿಯಾಗಿ ತರಿಸಿಕೊಳ್ಳಲು ಕ್ರಮವಹಿಸಲಾಗಿದೆ. ರಾಜ್ಯ ವಿಪತ್ತು ನಿಧಿಯ( ಎಸ್.ಡಿ.ಆರ್.ಎಫ್) ಅನುದಾನದಲ್ಲಿ ಟ್ಯಾಂಕರ್ ಖರೀದಿಗೆ ಸೂಚನೆ ನೀಡಲಾಗಿದೆ.

200 ಆಮ್ಲಜನಕ ಕಾನ್ಸಂಟ್ರೇಟರ್ ಖರೀದಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆ ಮತ್ತು ಬೇರೆ ಬೇರೆ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಾನ್ಸಂಟ್ರೇಟರ್ ಪೂರೈಸಲು ಸೂಚಿಸಲಾಗಿದೆ. ಆಕ್ಸಿಜನ್ ಬೆಡ್‍ನಲ್ಲಿರುವವರು ಹಾಗೂ ಸಾರಿ ಕೇಸ್ ರೋಗಿಗಳ ಪೈಕಿ ಮೂರ್ನಾಲ್ಕು ದಿನ ಆಕ್ಸಿಜನ್ ಕೊಟ್ಟರೆ ಸುಧಾರಿಸಿಕೊಳ್ಳುವ ಪೇಸೆಂಟ್‍ಗಳನ್ನು ಆಕ್ಸಿಜನ್ ಬೆಡ್‍ಗಳಿಂದ ಸ್ಥಳಾಂತರಿಸಿ ಕಾನ್ಸಂಟ್ರೇಟರ್ ಮೂಲಕ ಆಮ್ಲಜನಕ ಪೂರೈಸಲು ನಿರ್ಧರಿಸಲಾಗಿದೆ. ಇದರಿಂದ ಆಕ್ಸಿಜನ್ ಬೆಡ್‍ಗಳು ಖಾಲಿಯಾಗಿ ಅಗತ್ಯ ಇರುವ ಮತ್ತಷ್ಟು ಜನರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು. ಗ್ರಾಸೀಂ ಕಂಪನಿಯೊಂದಿಗೆ ಚರ್ಚಿಸಿ ಪೂರೈಕೆ ಹಾಗೂ ದಾಸ್ತಾನು ಪ್ರಮಾಣ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು. ಮೂರು ಮೆಟ್ರಿಕ್ ಟನ್‍ನಷ್ಟು ದಿನವೊಂದಕ್ಕೆ ಹೆಚ್ಚುವರಿಯಾಗಿ ತರಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಟ್ಯಾಂಕರ್‍ನಿಂದ ತರಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.

ಹೊಸದಾಗಿ ಪೂರೈಕೆಯಾಗಿ ಪೂರೈಕೆಯಾಗಿರುವ 10 ವೆಂಟಿಲೇಟರ್‍ಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಿ ಮೂಲ ಸೌಕರ್ಯ ಕಲ್ಪಿಸಿ ಸೇವೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಇದರಿಂದ ವೆಂಟಿಲೇಟರ್ ಸಹಿತ 10 ಐ.ಸಿ.ಯು ಬೆಡ್‍ಗಳು ರೋಗಿಗಳಿಗೆ ಲಭ್ಯವಾಗಲಿವೆ. ಇದರೊಂದಿಗೆ ಹೆಚ್ಚುವರಿಯಾಗಿ 25 ಆಕ್ಸಿಜನ್ ಬೆಡ್ ರೆಡಿಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಆಕ್ಸಿಜನ್ ಬೆಡ್-ಐಸಿಯು ವಾರ್ಡ್, ವೆಂಟಿಲೇಟರ್‍ನೊಂದಿಗೆ ವೈದ್ಯಕೀಯ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಹಾಗೂ ತಾಲೂಕಾ ಆಸ್ಪತ್ರೆಗಳಲ್ಲಿ 483 ವೈಲ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 405 ವೈಲ್ ರೆಮ್‍ಡಿಸಿವಿರ್ ದಾಸ್ತಾನು ಲಭ್ಯವಿದ್ದು, ಇದು ಮೂರು ದಿನಗಳಿಗೆ ಸಾಕಾಗುತ್ತದೆ. ಇಂದು 380 ಹೆಚ್ಚುವರಿ ರೆಮ್‍ಡಿಸಿವಿರ್ ಪೂರೈಕೆಯಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಮಾಡಲು ಡ್ರಗ್ ಕಂಟ್ರೋಲರ್‍ಗೆ ಸೂಚನೆ ನೀಡಲಾಗಿದೆ. ರಾಜ್ಯಕ್ಕೆ ಹೆಚ್ಚುವರಿ ಪ್ರಮಾಣದಲ್ಲಿ ರೆಮ್‍ಡಿಸಿವಿರ್ ಪೂರೈಕೆಯಾಗುತ್ತಿರುವುದರಿಂದ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನಿತ್ಯವೂ ಅಧಿಕಾರಿಗಳೊಂದಿಗೆ ವಿಡಿಯೋ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಗ್ರಾಸೀಂ, ಜಿಂದಾಲ್, ಹುಬ್ಬಳ್ಳಿ, ಹರಿಹರ ಸದರನ್ ಸಂಸ್ಥೆಯೊಂದಿಗೆ ಚರ್ಚಿಸಿ ಆಕ್ಸಿಜನ್ ಪೂರೈಕೆಗೆ ಕ್ರಮವಹಿಸಲಾಗಿದೆ. 194 ಜಂಬೋ ಸಿಲೆಂಡರ್‍ಗಳು ತರಿಸಿಕೊಳ್ಳಲಾಗಿದೆ. ಇನ್ನು ಹೆಚ್ಚುವರಿ ಆಕ್ಸಿಜನ್ ಪೂರೈಕೆಗೆ ಸರ್ವರೀತಿಯಲ್ಲೂ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Read More Articles