ನಮ್ಮ ಹಳ್ಳಿಗಳನ್ನು ಕೋಟೆ ಕಟ್ಟಿ ರಕ್ಷಿಸಬೇಕಾಗಿದೆ; ಡಾ.ಜಿನದತ್ತ ದೇಸಾಯಿ

ಬೆಳಗಾವಿ: ಭಾರತದ ಒಟ್ಟು ಇಪ್ಪತ್ನಾಲ್ಕು ರಾಜ್ಯಗಳ ಪೈಕಿ ಹದಿಮೂರು ರಾಜ್ಯಗಳ ಹಳ್ಳಿಗಳನ್ನು ಕೊರೋನಾ ದೆವ್ವ ಪ್ರವೇಶಿಸಿದೆ. ಈ ಭಯಾನಕ ಸಂಗತಿಯಿಂದ ಕರ್ನಾಟಕದ ನಾವು ಸಕಾಲದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ.

promotions

ಒಮ್ಮೆ ಈ ದೆವ್ವ ಹಳ್ಳಿಗಳನ್ನು ಪ್ರವೇಶಿಸಿತೆಂದರೆ, ಅದನ್ನು ನಿಯಂತ್ರಿಸಿಸುವುದು ಸಾಧ್ಯವಿಲ್ಲ. ನಮ್ಮ ಹಳ್ಳಿಗಳ ಬಹುಜನ ಕೃಷಿ ಆಧಾರಿತ ಜೀವನ ನಡೆಸುತ್ತಿರುವವರು ದಿನಬೆಳಗಾದರೆ ಅವರು ಹೊಲ ಮನೆಗಳಿಗೆ ಹೋಗದೇ ಗತ್ಯಂತರವಿಲ್ಲ.

promotions

ಕೃಷಿಯನ್ನು ಅವಲಂಭಿಸಿದ ಕೃಷಿ ಕಾರ್ಮಿಕರು ಹೊಲಗಳಿಗೆ ಹೋಗದೆ ಹೊಟ್ಟೆ ತುಂಬಿಕೊಳ್ಳುವುದು ಸಾಧ್ಯವಿಲ್ಲ. ಇವರಿಗೆ ನೀವು ಮನೆಯಿಂದ ಹೊರಗೆ ಬರಲೇಬೇಡಿ ಎಂದು ಹೇಳುವುದಕ್ಕೆ ಆಗುತ್ತದೆಯೇ? ಈ ದೆವ್ವ ಹಳ್ಳಿಗಳಿಗೆ ನುಗ್ಗಿ ಇಡಿ ದೇಶವನ್ನು ತಲ್ಲನಗೊಳಿಸುವ ಮೊದಲು, ಹಳ್ಳಿಗಳಿಗೆ ಇದು ಪ್ರವೇಶಿಸದಂತೆ ಲಸಿಕೆಯ ಕೋಟೆ ಕಟ್ಟಿ ಅದನ್ನು ತಡೆಯಬೇಕಾಗಿದೆ.

ಈ ದೈತ್ಯ ಹಳ್ಳಿಗಳನ್ನು ಪ್ರವೇಶಿಸಬಹುದೆಂದು ನಾವು ಮುಂಗಾಣಲಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ವರಿಷ್ಠ ಶ್ರೀ ಸ್ವತಂತ್ರದೇವ ಸಿಂಗ ಈಗ ಪರಿತಪಿಸುತ್ತಿದ್ದಾರೆ. ಇಂತಹ ಪಶ್ಚಾತಾಪ ಪಡುವ ಪ್ರಸಂಗ ನಮಗೆ ಬರದಿರಲಿ ಎನ್ನುವ ಕಳಕಳಿಯಿಂದ ನಾನು ನಮ್ಮ ಶಾಸಕರು ಮತ್ತು ಸಂಸದರಿಗೆ ಈ ಹೆಳಿಕೆಯ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ನಿಮ್ಮ ಚುನಾವಣೆ ಸಂದರ್ಭದಲ್ಲಿ ನೀವು ಈ ಹಳ್ಳಿಗಳ ಮತದಾರರ ಬಾಗಿಲಿಗೆ ಹೋಗಿ ಮತ ಕೇಳಲಿಲ್ಲವೇ? ನೀವು ಮನೆ ಮನೆಗೆ ಹೋಗಿ ಮತ ಕೇಳಿದ್ದೀರಿ, ಈಗ ಮತ್ತೊಂದು ಕೈಯಲ್ಲಿ ಕೊರೋನಾ ಪ್ರತಿಬಂಧಕ ಲಸಿಕೆ ಹಿಡಿದುಕೊಂಡು ನಿಮ್ಮ ಹಳ್ಳಿಯ ಮನೆ ಮನೆಗೆ, ನಿಮ್ಮ ಮತದಾರರಿಗೆ ಲಸಿಕೆ ಕೊಡಿಸಿ ಇದು ನಿಮ್ಮ ಕರ್ತವ್ಯವೂ ಹೌದು, ಜವಾಬ್ಧಾರಿಯೂ ಹೌದು ಈ ಗೊಡವೆ ನಮಗೇಕೆ ಎನ್ನುವ ಹೊನಗೇಡಿತನ ನಿಮ್ಮದಾಗದಿರಲಿ.

ಈ ರೀತಿ ನಾವು ನೀವೆಲ್ಲ ಲಸಿಕೆಯ ಕೋಟೆ ಕಟ್ಟಿ ನಮ್ಮ ಹಳ್ಳಿಗಳಲ್ಲಿ ಈ ರಾಕ್ಷಸ ಪ್ರವೇಶವಾಗದಂತೆ ತಡೆಯಬೇಕಾಗಿದೆ. ಇಲ್ಲವಾದರೆ ಪಶ್ಚಾತಾಪಪಡುವ ಪ್ರಸಂಗ ಬರುಬಹುದೆಂದು ನನ್ನ ಭಯ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪೃಸ್ಕೃತ್  ಡಾ.ಜಿನದತ್ತ ದೇಸಾಯಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More Articles