ಸಿಎಂ ಎಲ್ಲ ಮಾಡೋದಾದ್ರೆ ಬೆಳಗಾವಿಗೆ ಮಂತ್ರಿಗಳು ಯಾಕೆ ಬೇಕು: ಸಾಹುಕಾರ್ ಪ್ರಶ್ನೆ

ಬೆಳಗಾವಿ: “ಬಿಮ್ಸ್ ನಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡುವುದಾದರೇ, ಜಿಲ್ಲೆಯಲ್ಲಿರುವ ನಾಲ್ವರು ಮಂತ್ರಿಗಳು ಯಾಕೆ ಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

promotions

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆರಂಭಿಸಿರುವ “ಕೋವಿಡ್-19 ಹೆಲ್ಪ್ ಲೈನ್ ಸರ್ವೀಸ್ ಸೆಂಟರ್” ಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಿಲ್ಲೆಯಲ್ಲಿರುವ ಮಂತ್ರಿಗಳು ಬಿಮ್ಸ್ ಗೆ ತೆರಳಿ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು. ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡಲು ಆಗುವುದಿಲ್ಲ” ಎಂದರು.

promotions

“ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಿಯರೇ ಆಗಿರಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಸ್ಥಳೀಯರಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಅನುಭವವೂ ಇರುತ್ತದೆ. ಹೀಗಾಗಿ, ಜಿಲ್ಲೆಯಲ್ಲಿರುವ ನಾಲ್ವರು ಸಚಿವರಲ್ಲಿ ಒಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾಗಬೇಕಿತ್ತು” ಎಂದು ಹೇಳಿದರು.

2023ರ ಮೇ ನಲ್ಲಿ ಸಿಗಲಿದೆ ಉತ್ತರ: ಬಿಜೆಪಿಯಲ್ಲಿ ಭುಗಿಲೆದ್ದಿರುವ ಮುಖ್ಯಮಂತ್ರಿಗಳ ಬದಲಾವಣೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, “2023ರ ಮೇ ನಲ್ಲಿ ಅದಕ್ಕೆ ಉತ್ತರ ಸಿಗಲಿದೆ” ಎಂದು ಹೇಳುವ ಮೂಲಕ ಸತೀಶ ಅವರು ಮಾರ್ಮಿಕವಾಗಿ ಉತ್ತರ ನೀಡಿದರು.

ಅಂತಿಮ ವರದಿ ಬರಲಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಕರಣದ ಕುರಿತು ತನಿಖಾ ತಂಡ ಹಾಗೂ ನ್ಯಾಯಾಲಯದಿಂದಲೇ ಸತ್ಯಾಸತ್ಯತೆ ಹೊರಬರಬೇಕು. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಈಗಾಗಲೇ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರಕ್ಕೆ ತಮ್ಮ ಅಭಿಪ್ರಾಯ ಮತ್ತು ಆಗ್ರಹವನ್ನು ತಿಳಿಸಿದ್ದಾರೆ ಎಂದು ಹೇಳಿದರು.

“ಅಂತಿಮ ವರದಿ ಬರಲಿ, ಸತ್ಯಾಸತ್ಯತೆ ತಿಳಿಯಲಿ ಅಲ್ಲಿಯವರೆಗೆ ಕ್ಲೀನ್ ಚಿಟ್, ಮುಂದಿನ ಹೋರಾಟದ ಬಗ್ಗೆಯಾಗಲಿ ಮಾತನಾಡಲು ಆಗುವುದಿಲ್ಲ” ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರೂವ್ ಮಾಡಿದರೆ ಕಾಂಗ್ರೆಸ್ ನಿಂದ ಸನ್ಮಾನ: ಪೂಜೆ ಹಾಗೂ ಹೋಮದಿಂದ ಕೊರೊನಾ ಹೋಗುತ್ತದೆ ಎಂದರೆ ಮಾಡಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದನ್ನು ವೈಜ್ಞಾನಿಕವಾಗಿ ಎಲ್ಲರ ಮುಂದೆ ಪ್ರೂವ್ ಮಾಡಲಿ. ಪ್ರೂವ್ ಮಾಡಿದರೇ ಕಾಂಗ್ರೆಸ್ ನಿಂದ ಅಂತವರಿಗೆ ಸನ್ಮಾನ ಮಾಡಲಾಗುವುದು ಎಂದರು.

ಹೋಮ, ಹವನ ಮಾಡುವುದು ಬಿಜೆಪಿಯವರಿಗೆ ಹೊಸದೇನಲ್ಲ. ಹೋಮದಿಂದ ಕೊರೊನಾ ಹೋಗುತ್ತದೆ ಎನ್ನುವುದಾದರೆ ವೈದ್ಯರು, ಆಸ್ಪತ್ರೆ ಏಕೆ ಬೇಕು ಎಂದು ಸತೀಶ ಪ್ರಶ್ನಿಸಿದರು.

7ನೇ ತಾರೀಖಿನ ನಂತರ ಡಿಸಿ ಭೇಟಿ: ಜಿಲ್ಲೆಯಲ್ಲಿನ ಕೊರೊನಾ ನಿಯಂತ್ರಣ ಹಾಗೂ ಇನ್ನಿತರ ವಿಷಯಗಳ ಕುರಿತು ಕಾಂಗ್ರೆಸ್ ನಿಯೋಗದೊಂದಿಗೆ ಜೂನ್ 7 ನೇ ತಾರೀಖಿನ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಅಶೋಕ ಪಟ್ಟಣ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

Read More Articles