ಕೋವಿಡ್ ಸಮಯದಲ್ಲಿ ಸಮುದಾಯದ ಧ್ವನಿಯಾದ ವೇಣುಧ್ವನಿ
- 14 Jan 2024 , 11:43 PM
- Belagavi
- 151
ಬೆಳಗಾವಿ: ಸಮುದಾಯದ ಧ್ವನಿಯಾಗಿ ಮುನ್ನಡೆಯುತ್ತಿರುವ ವೇಣುಧ್ವನಿ ೯.೪ ಎಫ್.ಎಮ್ ಕೊರೊನಾ ಸಂದಿಗ್ಧ ಸಮಯದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳೊಂದಿಗೆ ಕೇಳುಗರನ್ನು ತಲುಪುತ್ತಿದೆ . ಕೋವಿಡ್ ೧೯ ಇಡೀ ಜಗತ್ತಿನ ಪಾಲಿಗೆ ಸಂಕಷ್ಟಗಳನ್ನು ತಂದೊಡ್ಡಿದ ಜಾಗತಿಕ ಸಮಸ್ಯೆ .

ಈ ವೈರಸ್ ಎದುರಿಸಲು ಬೇಕಾದ ಮುಖ್ಯ ಅಸ್ತ್ರ ಅದು ಜಾಗೃತಿ ಈ ನಿಟ್ಟಿನಲ್ಲಿ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರವು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.ಕೆ.ಎಲ್ .ಇ ವೇಣುಧ್ವನಿ ಮನರಂಜನೆಯ ಜೊತೆಗೆ ಆರೋಗ್ಯ ಜಾಗೃತಿ ಮತ್ತು ಸಾಮಾಜಿಕ ಜಾಗೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಕೋವಿಡ್ ಸಮಯದಲ್ಲಿ ಜನ ಜಾಗೃತಿ ಅಭಿಯಾನವನ್ನು ಆರಂಭಿಸಿತು.

ಕೆ.ಎಲ್.ಇ ಆಸ್ಪತ್ರೆಯ ವೈದ್ಯರು,ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರ ಸಹಯೋಗದೊಂದಿಗೆ ಕೊರೊನಾ ಕುರಿತಾಗಿ ಜನರಲ್ಲಿ ತಿಳುವಳಿಕೆ ಮೂಡಿಸಲು ಆರಂಭಿಸಲಾಯಿತು. ಕೊರೊನಾ ವೈರಸ್ ಎಂದರೇನು ,ಅದು ಹರಡುವ ಬಗೆ,ಕೊರೊನಾದಿಂದ ಸುರಕ್ಷತಾ ಕ್ರಮಗಳು ,ಮತ್ತು ಈ ಕುರಿತಾದ ತಪ್ಪು ತಿಳುವಳಿಕೆಗಳು ಮತ್ತು ಆರೋಗ್ಯಕರ ಜೀವನ ಶೈಲಿಯ ಕುರಿತು ವೇಣುಧ್ವನಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ. ಕೊರೊನಾ ನಿವಾರಣೆಗೆ ಇಡೀ ಸರ್ಕಾರ ಮತ್ತು ಆಡಳಿತ ಯಂತ್ರ ಪಣತೊಟ್ಟಿರುವ ಸಂದರ್ಭದಲ್ಲಿ ವೇಣುಧ್ವನಿ ಕೂಡ ಸರ್ಕಾರದ ಈ ಕಾರ್ಯದಲ್ಲಿ ಕೈ ಜೋಡಿಸುತ್ತಿದೆ.
ಬೆಳಗಾವಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಾನಗರ ಪಾಲಿಕೆ ವತಿಯಿಂದ ಜನ ಜಾಗೃತಿಗಾಗಿ ಪ್ರಕಟಣೆಗಳು, ಅಧಿಕಾರಿಗಳ ಸಂದರ್ಶನ ಗಳು ,ಸಂದೇಶಗಳನ್ನು ಧ್ವನಿಮುದ್ರಣ ಮಾಡಿ ವೇಣುಧ್ವನಿಯಲ್ಲಿ ಬಿತ್ತರಿಸಲಾಗುತ್ತಿದೆ.
ಈ ವಿಷಮ ಪರಿಸ್ಥಿತಿಯಲ್ಲಿ ಮಾಧ್ಯಮವಾಗಿ ತನ್ನ ಜವಾಬ್ದಾರಿಯನ್ನು ಮೆರೆಯುವ ನಿಟ್ಟಿನಲ್ಲಿ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಜನರಲ್ಲಿ ಅರಿವು ಮೂಡಿಸುವ ,ಆತ್ಮ ವಿಶ್ವಾಸ ತುಂಬುವ ವೈವಿದ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿ ಲಾಕ್ ಡೌನ ಮಾಡಿ ಈ ವೈರಸ್ ಹರಡದಂತೆ ನೋಡಿಕೊಳ್ಳುವಾಗ ದಿನನಿತ್ಯದ ಅದಾಯವನ್ನೇ ನೆಚ್ಚಿರುವ ತರಕಾರಿ ಮಾರಾಟಗಾರರು,ಹಣ್ಣು ಮಾರಾಟಗಾರರು,ಬಿಡಿ ವ್ಯಾಪಾರಸ್ಥರು, ನೇಕಾರರು,ದರ್ಜಿಗಳು, ಅಟೋರಿಕ್ಷಾ ಚಾಲಕರು ಅಕ್ಷರಶಃ ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿತ್ತು .
ಹೊಟ್ಟೆ ತುಂಬಿಕೊಳ್ಳುವದೇ ಕಷ್ಟಕರವಾದ ಸಂದರ್ಭದಲ್ಲಿ ವೇಣುಧ್ವನಿ ಕಾಲ್ ಆ್ಯಂಡ್ ಸಾಲ್ವ ಹೆಸರಿನಲ್ಲಿ ಸಹಾಯವಾಣಿ ಆರಂಭಿಸಿತು.ಈ ಕಾರ್ಯಕ್ರಮದ ಫಲಶ್ರುತಿಯಾಗಿ ಆರ್ಥಿಕ ಸಂಕಷ್ಟದಲ್ಲಿ ಇದ್ದವರಿಗೆ ಅಹಾರ ಧಾನ್ಯಗಳ ಕಿಟ್,ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳು ಮತ್ತು ಪರ್ಯಾಯ ಉದ್ಯೋಗ ವ್ಯವಸ್ಥೆ ಕಲ್ಪಿಸಲಾಯಿತು.
ಇದರ ಜೊತೆಗೆ ತಾವು ನೇಯ್ದ ಸೀರೆಗಳನ್ನು ಖರೀದಿಸುವ ಗ್ರಾಹಕರಿಲ್ಲದೇ ಆರ್ಥಿಕ ಸಮಸ್ಯೆಯಲ್ಲಿದ್ದ ನೇಕಾರರ ಸೀರೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾರುಕಟ್ಟೆ ಒದಗಿಸಿಕೊಡುವ ಮೂಲಕ ಬೆಳಗಾವಿಗರ ನೋವಿಗೆ ಮಿಡಿದ ವೇಣುಧ್ವನಿ ಕರೆ ಮಾಡಿದವರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಸಾರ್ಥಕ ಪ್ರಯತ್ನವಾಗಿತ್ತು .
ಇನ್ನು ದೈನಂದಿನ ಕಾರ್ಯ ಕ್ರಮಗಳ ಜೊತೆಗೇ ಸ್ಮಾರ್ಟ್, ಯುನಿಸೆಫ್ ಮತ್ತು ವಿಶ್ವ ಅರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಮಾಸ್ಕ ,ಕೈ ತೊಳೆಯುವದು,ಸಾಮಾಜಿಕ ಅಂತರ ಪಾಲಿಸುವ ಕುರಿತಾಗಿ ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸುವ ಕಾರ್ಯ ವೇಣುಧ್ವನಿಯ ಸಮಾಜಮುಖಿ ಕೆಲಸಗಳಲ್ಲಿ ಒಂದಾಗಿತ್ತು .
ವೈದ್ಯರು ಮತ್ತು ಸರಕಾರಿ ಅಧಿಕಾರಿಗಳು ಫೋನ್ ಇನ್ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೇಳುಗರ ಸಂದೇಹ ಮತ್ತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿದ್ದು ವಿಶೇಷವಾಗಿತ್ತು.
ಡಾ.ಸುನೀಲ್ ಜಲಾಲಪುರೆ ನಿರ್ದೇಶಕರು ಕೆ.ಎಲ್ ಇ ವೇಣುಧ್ವನಿ ,ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ










