ಬೈಲಹೊಂಗಲನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಶಾಸಕ ಸತೀಶ
- 14 Jan 2024 , 10:18 PM
- Belagavi
- 111
ಬೈಲಹೊಂಗಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬೈಲಹೊಂಗಲ ತಾಲೂಕಿನ ವಣ್ಣೂರ, ಮಲ್ಲಾಪುರ, ನೇಸರಗಿ, ಮತ್ತಿಕೊಪ್ಪ ಹಾಗೂ ಗೋಕಾಕ ತಾಲೂಕಿನ ಖನಗಾಂವ ಗ್ರಾಮಗಳಿಗೆ ಇಂದು ಭೇಟಿ ನೀಡಿ, ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ, ಮುಂಬರುವ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು. ಅವರ ನಾಯಕತ್ವದಡಿ ಆಯಾ ಮತಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕು. ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸತ್ಯವನ್ನು ತಲುಪಿಸುವ ಕೆಲಸ ಮಾಡಿ:ಎದುರಾಳಿ ಪಕ್ಷದವರಿಗೆ ತಕ್ಕ ಉತ್ತರ ನೀಡಲು ನಮ್ಮ ಕಾರ್ಯಕರ್ತರು ಸಜ್ಜಾಗಬೇಕು. ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿಗಳನ್ನು ಭಿತ್ತರಿಸುತ್ತಿರುವವರ ವಿರುದ್ಧ ತಾವು ಜಾಗೃತರಾಗಿ, ಜನರಿಗೆ ಸತ್ಯವನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಳೆದ 7 ವರ್ಷಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮೋದಿ ಸರ್ಕಾರ ಜನಸಾಮಾನ್ಯರ ಜೀವನ ಸುಧಾರಿಸುವ ಕೆಲಸ ಮಾಡುತ್ತಿಲ್ಲ. ಆದರೂ, ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವಕರಿಗೆ ಮತದಾನದ ಹಕ್ಕು ನೀಡಿದ್ದೆ ಕಾಂಗ್ರೆಸ್:ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾವ ಪಕ್ಷ ಉತ್ತಮ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈಗಿನ ಯುವಕರು ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಯುವಕರಿಗೆ ಮತದಾನದ ಹಕ್ಕನ್ನು ನೀಡಿದ್ದೇ ಕಾಂಗ್ರೆಸ್ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, 21 ವರ್ಷವಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದ್ದರು. ಇದರಿಂದ 18 ವರ್ಷ ಮೇಲ್ಪಟ್ಟ ಯುವಕರಿಗೂ ಮತದಾನದ ಹಕ್ಕು ಸಿಗುವಂತಾಯಿತು ಎಂದು ಹೇಳಿದರು.
ನಂತರ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸತೀಶ ಅವರನ್ನು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಸನ್ಮಾನಿಸಿ, ಅಭಿನಂದಿಸಿದರು.
ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಮುಖಂಡರಾದ ಹಬೀಬ ಶಿಲೇದಾರ್, ಭರಮಣ್ಣ ಸತ್ಯಣ್ಣವರ, ಎತ್ತಿನಮನಿ ವಕೀಲರು, ನಿಂಗಪ್ಪ ಅರಕೇರಿ, ಪಿ.ಕೆ. ನೀರಲಕಟ್ಟಿ, ಸಿದ್ದಪ್ಪ ವಣ್ಣೂರ, ನಿಂಗಪ್ಪ ತಳವಾರ ಸೇರಿ ಇನ್ನಿತರ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.










