ನ್ಯಾ. ಮೋಹನ ಶಾಂತನಗೌಡರ ಜನಸಾಮಾನ್ಯರ ನ್ಯಾಯಾಧೀಶ: ನ್ಯಾ. ಎನ್.ವಿ. ರಮಣ

ಬೆಂಗಳೂರು:ನ್ಯಾಯಮೂರ್ತಿ ಮೋಹನ ಶಾಂತನಗೌಡರ ಅವರ ನಿಧನದಿಂದ ದೇಶ ಜನಸಾಮಾನ್ಯರ ನ್ಯಾಯಾಧೀಶರನ್ನು ಕಳೆದುಕೊಂಡಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ವಿ. ರಮಣ ಅವರು ನುಡಿದರು.

promotions

ಅವರು ಇಂದು ಏಪ್ರಿಲ್ ನಲ್ಲಿ ನಿಧನರಾದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಮೋಹನ ಎಂ. ಶಾಂತನಗೌಡರ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

promotions

ದೇಶದ ನ್ಯಾಯಶಾಸ್ತ್ರಕ್ಕೆ ಅವರ ಕೊಡುಗೆ ಅನನ್ಯವಾದುದು. ರೈತರೂ ಬಳಕೆದಾರರೇ ಎಂಬ ತೀರ್ಪು ಹಾಗೂ ಇತರ ಹಲವು ಜನಪರ ಕಾಳಜಿಯ ತೀರ್ಪು ನೀಡಿದ ನ್ಯಾ. ಶಾಂತನಗೌಡರ ಅವರ ತೀರ್ಪುಗಳಲ್ಲಿ ಸರಳತೆ, ಸಾಮಾನ್ಯ ಜ್ಞಾನವನ್ನು ಹೇರಳವಾಗಿ ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ನ್ಯಾ. ಶಾಂತನಗೌಡರ ಜೊತೆಗೆ ನಿಕಟ ಒಡನಾಟ ಹೊಂದಿದ್ದು, ಅವರ ಹಾಸ್ಯಪ್ರಜ್ಞೆ, ಸರಳತೆ ಅವಿಸ್ಮರಣೀಯ ಎಂದು ಅವರು ವಿವರಿಸಿದರು.

ನ್ಯಾ. ಮೋಹನ ಶಾಂತನಗೌಡರ ಹೆಸರು ಶಾಶ್ವತಗೊಳಿಸಲು ಸರ್ಕಾರ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶಾಂತನಗೌಡರ ಅವರ ಕುರಿತ ಕಿರುಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನ್ಯಾಯಮೂರ್ತಿ ಮೋಹನ ಎಂ.ಶಾಂತನಗೌಡರ ಬದುಕು, ಸಾಧನೆ, ಅವರ ತೀರ್ಪುಗಳು, ನ್ಯಾಯದಾನದ ಕುರಿತ ಅವರ ವಿಚಾರಗಳನ್ನು ಶಾಶ್ವತಗೊಳಿಸುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳುವುದು ಎಂದು ನುಡಿದರು.

ಅವಿಭಜಿತ ಧಾರವಾಡ ಜಿಲ್ಲೆಯ ಗ್ರಾಮೀಣ ಹಿನ್ನೆಲೆಯಿಂದ ಬಂದ ನ್ಯಾಯಮೂರ್ತಿ ಶಾಂತನಗೌಡ ಅವರು ಅತ್ಯುನ್ನತ ಹುದ್ದೆಗೇರಿದರೂ ತಮ್ಮ ಸರಳತೆ, ಸೌಜನ್ಯಯುತ ನಡವಳಿಕೆಯನ್ನು ಕಾಯ್ದುಕೊಂಡಿದ್ದರು. ಸಮಾಜದಲ್ಲಿ ಜೀವಂತವಾಗಿರುವ ಹಾಗೂ ಜೀವಂತಿಕೆ ಇರುವ ವ್ಯಕ್ತಿಗಳೆಂಬ ಎರಡು ವರ್ಗಗಳಿವೆ. ನ್ಯಾಯಮೂರ್ತಿ ಶಾಂತನಗೌಡರು ಜೀವಂತಿಕೆಯುಳ್ಳ ವ್ಯಕ್ತಿಯಾಗಿದ್ದರು. ಅವರು ಧಾರವಾಡದಲ್ಲಿ ವಕೀಲರಾಗಿದ್ದಾಗಲೇ ತಮಗೆ ಪರಿಚಿತರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದಾಗಲೂ ಅದೇ ಆತ್ಮೀಯತೆ, ಸರಳತೆಯನ್ನು ಉಳಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು.

ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಹೊಂದಿದಾಗ ಅವಿಭಜಿತ ಧಾರವಾಡ ಜಿಲ್ಲೆಯ ವಕೀಲರ ಸಂಘಗಳಿಗೆ ಭೇಟಿ ನೀಡಿ, ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ತಮ್ಮ ಹಳೆಯ ಸಹೋದ್ಯೋಗಿಗಳೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿ, ಬಂದಿದ್ದರು. ಹೀಗೆ ಉನ್ನತ ಹುದ್ದೆಗೇರಿದ್ದರೂ, ತಮ್ಮ ಬೇರನ್ನು ಮರೆಯದ ವಿಶಿಷ್ಟ ವ್ಯಕ್ತಿತ್ವ ಅವರದಾಗಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ನ್ಯಾಯಮೂರ್ತಿ ಶಾಂತನಗೌಡರ ಅವರ ಹಾಸ್ಯಪ್ರಜ್ಞೆಯನ್ನು ವಿಶೇಷವಾಗಿ ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಇದು ಅವರ ಭಾಷಣಗಳಲ್ಲಿ, ಇತರರೊಂದಿಗಿನ ಸಂಭಾಷಣೆಯಲ್ಲಿ ವ್ಯಕ್ತವಾಗುತ್ತಿತ್ತು. ತಮ್ಮನ್ನು ಭೇಟಿಯಾಗಲು ಬಂದವರೊಂದಿಗೆ ಸರಳತೆ, ಸಜ್ಜನಿಕೆಯಿಂದ ನಡೆದುಕೊಳ್ಳುವ ಮೂಲಕ ಅವರಿಗೆ ಇರಿಸು-ಮುರುಸಾಗದಂತೆ ಕಾಳಜಿ ವಹಿಸುತ್ತಿದ್ದರು ಎಂದು ನುಡಿದರು.

‘ಸಾಧಕನಿಗೆ ಸಾವು ಅಂತ್ಯವಲ್ಲ’ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ನ್ಯಾಯಮೂರ್ತಿ ಶಾಂತನಗೌಡರು ನಮ್ಮೆಲ್ಲರ ಮನದಲ್ಲಿ ಚಿರಾಯುವಾಗಿದ್ದಾರೆ ಎಂದು ಮುಖ್ಯಮಂತ್ರಿಗಳು ನುಡಿದರು.

ಸಮಾರಂಭದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಬ್ದುಲ್ ನಝೀರ್, ನ್ಯಾಯಮೂರ್ತಿ ಬಿ.ವಿ. ನಾಗರತ್ನ, ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಭಾರಿ ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ವಕೀಲರ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಬಾಬು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Read More Articles