ಬೆಳಗಾವಿ ಮಾಣಿಕ್ಯ ಮರೆಯಾಗಿ ಇಂದಿಗೆ ವರ್ಷ
- 14 Jan 2024 , 10:23 PM
- Belagavi
- 96
ಬೆಳಗಾವಿ :ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಸಿದ್ದ ಸುರೇಶ ಅಂಗಡಿ ನಮ್ಮನ್ನು ಅಗಲಿ ಇಂದಿಗೆ ಬರೋಬರಿ ಒಂದು ವರ್ಷ ಗತಿಸಿತು.

ಸರಳ ಸಜ್ಜನಿಕೆ, ಸಮಯ ಪ್ರಜ್ಞೆ, ನೇರ ನುಡಿಯ ನಿಷ್ಠುರಾಗಿದ್ದ ಸುರೇಶ ಅಂಗಡಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದು ಇತಿಹಾಸ.

ಕೊರೊನಾ ಹೆಮ್ಮಾರಿಗೆ ಬಲಿಯಾದ ಸುರೇಶ ಅಂಗಡಿ ಅವರು ಬೆಳಗಾವಿಯ ಹಳ್ಳಿಯಿಂದ ಡೆಲ್ಲಿ ವರೆಗೂ ತಮ್ಮದೆಯಾದ ಛಾಪು ಮೂಡಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆಯೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪ್ರತಿನಿಧಿಸಿದ್ದ ಅವರು ವಾಜಪೇಯಿ ಪ್ರೀತಿಗೆ ಪಾತ್ರರಾಗಿದ್ದರು. ಅಂದಿನಿಂದ ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿ ಜನರ ಮನದಲ್ಲಿ ಅಚ್ಚಳಿಯದ ರೀತಿ ಉಳಿದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಧೀನ ದಲಿತರು, ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದ್ದ ಅವರು, ಎಲ್ಲರಿಗೂ ಮಹಾಮಾರಿ ಕೊರೋನಾದ ವಿರುದ್ಧ ಹೋರಾಡಲು ದೈರ್ಯ ತುಂಬುತ್ತಿದ್ದ ಅವರು ಕೊನೆಗೆ ಹೆಮ್ಮಾರಿ ಅವರನ್ನೇ ಬಲಿ ಪಡೆದು ಇಡೀ ಬೆಳಗಾವಿ ಲೋಕಸಭಾ ಅಷ್ಟೆ ಅಲ್ಲದೆ ರಾಜ್ಯದ ಅವರ ಅಭಿಮಾನಿಗಳನ್ನು ಕತ್ತಲೆಗೆ ದೂಡಿತು.
7 ಸೆ.2020 ರಂದು ಬೆಳಗಾವಿ ಕಿತ್ತೂರು ಮಾರ್ಗವಾಗಿ ಹುಬ್ಬಳ್ಳಿ ಧಾರವಾಡ ರೈಲ್ವೆ ಮಾರ್ಗದ ಯೋಜನೆಗೆ 927 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಿದ್ದರು. ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಸ್ವಂತ ಕಾಳಜಿಯಿಂದ ಸುರೇಶ ಅಂಗಡಿ ಅವರು ಕೊನೆಯ ಯೋಜನೆ ಘೋಷಣೆ ಮಾಡಿ ದೆಹಲಿಯ ಸಂಸತ್ತ ಅಧಿವೇಶನದಲ್ಲಿ ಪಾಲ್ಗೊಳ್ಳಲು ಹೋದವರು ಮತ್ತೆ ಬೆಳಗಾವಿ ಬರಲೇ ಇಲ್ಲ.
ವೀರಶೈವ ಲಿಂಗಾಯತ ಬಣಿಗ ಸಮುದಾಯದ ಪ್ರಮುಖ ಮುಖಂಡರಾಗಿದ್ದ ಸುರೇಶ ಅಂಗಡಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ರೇಸ್ ನಲ್ಲಿ ಮೊದಲ ಹೆಸರು ಅವರದ್ದಿತ್ತು. ಕೇವಲ ರಾಜಕೀಯ ಮಾತ್ರವಲ್ಲ. ಶೈಕ್ಷಣಿಕ, ಉದ್ಯಮ, ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಕೊರೋನಾದಿಂದ ಕಣ್ಮರೆಯಾಗಿ ವರ್ಷ ಕಳೆದಿದೆ. ಸುರೇಶ ಅಂಗಡಿ ಎಂದಿಗೂ ಮರೆಯದ ಅಪರೂಪದ ವ್ಯಕ್ತಿ. ಅವರ ಪ್ರಥಮ ಪುಣ್ಯ ಸ್ಮರಣೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಅವರ ಕುಟುಂಬ, ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ನಡೆಯುತ್ತಿದ್ದಾರೆ.










