ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆ : ಜಿಲ್ಲಾಧಿಕಾರಿ ಎಂ. ಜಿ.ಹಿರೇಮಠ

ಬೆಳಗಾವಿ: ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜುಗಳು ಸೇರಿದಂತೆ ಜಿಲ್ಲೆಯಾದ್ಯಂತ ಅ.20ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.

promotions

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ (ಸೆ.28) ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

promotions

ಅಂದು ಬೆಳಿಗ್ಗೆ ಕೋಟೆ ಕೆರೆ ಬಳಿ ಮಹರ್ಷಿ ವಾಲ್ಮೀಕಿ‌ ಭಾವಚಿತ್ರಕ್ಕೆ ಪೂಜೆ‌ ನೆರವೇರಿಸಲಾಗುವುದು. ಅದಾದ ಬಳಿಕ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಮಟ್ಟದ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ವೇದಿಕೆಗೆ ದಿ.ಲಕ್ಷ್ಮಣರಾವ್ ಜಾರಕಿಹೊಳಿ ಹೆಸರು:

ಕಾರ್ಯಕ್ರಮದ‌ ವೇದಿಕೆಗೆ ಪ್ರತಿವರ್ಷ ಒಬ್ಬ ಮಹನೀಯರ ಹೆಸರು ಇಡಲಾಗುತ್ತದೆ. ಅದೇ ಪ್ರಕಾರ ಈ ಬಾರಿ ದಿ.ಲಕ್ಷ್ಮಣರಾವ್ ಜಾರಕಿಹೊಳಿ‌ ದಂಪತಿಯ ಹೆಸರು ಇಡಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ಸಭೆಯಲ್ಲಿ ಸಲಹೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈ ಬಾರಿ ದಿ.ಲಕ್ಷ್ಮಣರಾವ್ ಜಾರಕಿಹೊಳಿ ದಂಪತಿ ಹೆಸರು ಇಡಬೇಕು ಎಂದು ತಿಳಿಸಿದರು.

ವಾಲ್ಮೀಕಿ‌ ಜೀವನಚರಿತ್ರೆ ಕುರಿತು ಉಪನ್ಯಾಸ:

ಇಡೀ ದೇಶಕ್ಕೆ ಮಾದರಿಯಾಗಿರುವ ರಾಮಾಯಣ ಮಹಾಕಾವ್ಯವನ್ನು ಬರೆದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜೀವನದ ಬಗ್ಗೆ ಕೈಪಿಡಿ ರಚಿಸಿ ಪ್ರತಿಯೊಬ್ಬ ನಾಗರಿಕರಿಗೆ ಮಹರ್ಷಿ ವಾಲ್ಮೀಕಿ ಬಗ್ಗೆ ತಿಳಿಸಬೇಕಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ, ಅವರ ವಿಚಾರ ಧಾರೆ, ಸಮಾಜ, ಸಂಸ್ಕೃತಿ ಪರಂಪರೆ ವಿಷಯವಾಗಿ ಜಾಗೃತಿ ಮೂಡಿಸುವಂತಹ ಉಪನ್ಯಾಸವನ್ನು ಏರ್ಪಡಿಸಲಾಗುತ್ತದೆ. ಇದಕ್ಕಾಗಿ ಉತ್ತಮ ಉಪನ್ಯಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಅಲ್ಲದೇ ರಾಣಿ ಚೆನ್ನಮ್ಮ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಮತ್ತು ಎಲ್ಲಾ ಮಹಾವಿದ್ಯಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರದ‌ ಮಾರ್ಗಸೂಚಿ ಪ್ರಕಾರ ಆಚರಿಸಬೇಕು ಎಂದು ಅವರು ಸೂಚಿಸಿದರು.

ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ ನೀಡುವ ಬದಲು ವೀರ ಪುರುಷ ಮತ್ತು ಮಹಿಳೆಯರ ಪುಸ್ತಕಗಳನ್ನು ನೀಡಬೇಕು ಎಂದು ವಾಲ್ಮೀಕಿ ಸಮಾಜದ ಸದಸ್ಯರ ಕೋರಿಕೆಯಂತೆ ಕ್ರಮ ಕೈಗೊಳ್ಳಲಾಗುವುದು ಎಅಮಸು ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ, ಉಪ ಪೋಲಿಸ್ ಆಯುಕ್ತರಾದ ವಿಕ್ರಮ ಅಮಟೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಜಿಲ್ಲಾ ಪರಿಶಿಷ್ಟ ವರ್ಗದ ಜಿಲ್ಲಾ ಅಧಿಕಾರಿಗಳಾದ ಸದಾಶಿವ ಬಡಿಗೇರ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ವಿವಿಧ ಸಂಘಟನೆಯ ಮುಖಂಡರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Read More Articles