ಅ.1 ರಿಂದ 31 ರವರೆಗೆ ಸ್ವಚ್ಛ ಭಾರತ ಅಭಿಯಾನ: ಅಪರ ಜಿಲ್ಲಾಧಿಕಾರಿ

ಬೆಳಗಾವಿ: ಆಜಾದಿ ಕಾ ಅಮೃತ ಮಹೋತ್ಸವ"ದ ಅಂಗವಾಗಿ ಅಕ್ಟೋಬರ್ 1 ರಿಂದ 31ರವರೆಗೆ ನಡೆಯಲಿರುವ "ಸ್ವಚ್ಛ ಭಾರತ" ಅಭಿಯಾನದಲ್ಲಿ ಎಲ್ಲ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.

promotions

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ನಿರುಪಯುಕ್ತ ಪ್ಲಾಸ್ಟಿಕ್ ಸಂಗ್ರಹಿಸಲು ರಚಿಸಲಾದ ಜಿಲ್ಲಾ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

promotions

"ಆಜಾದಿ ಕಾ ಅಮೃತ ಮಹೋತ್ಸವ"ದ ಅಂಗವಾಗಿ ವಿವಿಧ ಕಾರ್ಯಕ್ಕಮಗಳನ್ನು ಹಮ್ಮಿಕೊಳ್ಳಲು 75 ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಜಿಲ್ಲೆಯ ಕಿತ್ತೂರು ತಾಲ್ಲೂಕು ಒಂದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಅದೇ ರೀತಿ, ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಇವರ ಮಾರ್ಗದರ್ಶನದಂತೆ ಅಕ್ಟೋಬರ್ 01 ರಿಂದ ಅಕ್ಟೋಬರ್ 31 ರ ವರೆಗೆ ಗಾಂಧಿ ಜಯಂತಿ ಅಂಗವಾಗಿ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸ್ವಚ್ಛ ಭಾರತ ಅಭಿಯಾನ ಆಚರಿಸಲು ನಿರ್ಧರಿಸಲಾಗಿದೆ.

ಗ್ರಾಮ,ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ 11 ಸಾವಿರ ಕೆ.ಜಿ ನಿರುಪಯುಕ್ತ ಪ್ಲಾಸ್ಟಿಕನ್ನು ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುವ ಕಾರ್ಯವಿರಲಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.

ಪ್ಲಾಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯ, ಮತ್ತು ಬಯೋ ಮೆಡಿಕಲ್ ವೇಸ್ಟ್ ನ್ನು ಸಂಗ್ರಹಿಸಲು, ಸೂಕ್ತ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಬೇಕು. ವಾಯುಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಶಾಲೆ- ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ:
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಮತ್ತು ತ್ಯಾಜ್ಯ ವಿಲೇವಾರಿ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ,ಸ್ವಚ್ಛತೆ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ‌ ವಿಶ್ವವಿದ್ಯಾಲಯದ ಹಾಗೂ ಇತರೆ ಉನ್ನತ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.

ಅಲ್ಲದೇ, ಅರಣ್ಯ ಇಲಾಖೆಯ ವತಿಯಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅರಣ್ಯ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕ ಉದ್ಯಮಗಳ ಇಲಾಖೆಯಿಂದ ಸಿಎಸ್‌ಆರ್ ನಿಧಿಯ ಒಂದು ಭಾಗವನ್ನು ಪರಿಸರ ಸಂರಕ್ಷಣಾ ಮತ್ತು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮೀಸಲಿಡಬೇಕು. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಸಫಾಯಿ ಕರ್ಮಚಾರಿ ಮತ್ತು ತ್ಯಾಜ್ಯ ಸಂಗ್ರಹಣೆ ಮತ್ತು ಸಂಬಂಧಿಸಿದ ಉದ್ಯಮಶೀಲತೆ ಬಗ್ಗೆ ಕೌಶಲ್ಯ ತರಬೇತಿಯನ್ನು‌ ಆಯೋಜಿಸಬೇಕು ಹಾಗೂ ಸ್ವಯಂ ಸೇವಾ ಸಂಸ್ಥೆಗಳು‌ ಮತ್ತು ನಾಗರೀಕರು ಸ್ವಯಂಪ್ರೇರಿತರಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.

ಅಭಿಯಾನದಲ್ಲಿ ಪಾಲ್ಗೊಳ್ಳಲು ಇಲಾಖೆಗಳಿಗೆ ಸೂಚನೆ:
ಎಲ್ಲಾ ಇಲಾಖೆಗಳು ಮತ್ತು ಎಲ್ಲಾ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಮಗ್ರವಾಗಿ ಪಾಲ್ಗೊಳ್ಳಬೇಕು. ಇಲಾಖೆಗಳು ತಮಗೆ ನಿಗದಿಪಡಿಸಿದ ದಿನಾಂಕಗಳಂದು ತಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಯ ಕಾರ್ಯ ಕೈಗೊಳ್ಳಬೇಕು.

ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಸಂಗ್ರಹಿಸಬೇಕು ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರಿಗೆ ಸ್ವಚ್ಛತೆ ಹಾಗೂ ಒಣಕಸ- ಹಸಿಕಸವನ್ನು ಬೇರ್ಪಡಿಸುವ ಬಗ್ಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ನಡೆಸಿ, ಅರಿವು ಮತ್ತು ಜಾಗೃತಿ ಮೂಡಿಸಬೇಕು.

ಸ್ವ-ಸಹಾಯ ಸಂಘಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ನಿರಂತರವಾಗಿ ಕಸ ಸಂಗ್ರಹಣೆ ವಿಂಗಡಣೆ ಹಾಗೂ ವಿಲೇವಾರಿಗಾಗಿ ಒಂದು ಬುಸಿನೆಸ್ ಮಾಡೆಲ್ ನ್ನು ಸ್ಥಾಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಭಿಯಾನದ ವರದಿ ಸಲ್ಲಿಸಲು ಸೂಚನೆ :
ಎಲ್ಲ ಇಲಾಖೆಗಳು ನಿಗದಿತ ದಿನಾಂಕಗಳಂದು ಸ್ವಚ್ಛತಾ ಅಭಿಯಾನ ಕೈಗೊಂಡು, ಇಲಾಖೆಗಳಿಗೆ ನೀಡಲಾಗುವ ವರದಿ ಸಲ್ಲಿಕೆಯ ಪ್ರತಿಯನ್ನು ಭರ್ತಿ ಮಾಡಿ, ನೆಹರೂ ಯುವ ಕೇಂದ್ರದ ಇ-ಮೇಲ್ ವಿಳಾಸ nykbgm@gmail.com ಗೆ ವರದಿ ಹಾಗೂ ಭಾವಚಿತ್ರಗಳನ್ನು ಸಲ್ಲಿಸಬೇಕು ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿಗಳಾದ ರೋಹಿತ ಕಲರಾ ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ವಾಣಿಜ್ಯ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ಅಂಚೆ ಇಲಾಖೆಯ ಅಧಿಕಾರಿಗಳು, ಧಾರ್ಮಿಕ ಹಾಗೂ ಸ್ವಯಂ ಸೇವಾ ಸಂಘಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Read More Articles