ಕಾಲುವೆಗೆ ಬಿದ್ದು ಇಬ್ಬರ ಮಕ್ಕಳ ದಾರುಣ ಸಾವು
- 15 Jan 2024 , 5:49 AM
- Belagavi
- 122
ಅಥಣಿ : ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಲುವೆ ಹತ್ತಿರ ಆಟವಾಡಲು ಹೋಗಿ ಕಾಲು ಜಾರಿ ಕರಿಮಸೂತಿ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.

ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಹಾಯ್ದು ಹೋಗಿರುವ ಕರಿಮಸೂತಿ ಕಾಲುವೆ ನೀರು ತುಂಬಿ ಹರಿಯುತ್ತಿದ್ದು ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಕ್ಕಳಾದ ಶ್ರೀಧರ ಶಂಕರ ಪುಂಡಿಪಲ್ಲೆ (3),ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8),ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಎಂಬ ನಾಲ್ಕು ಜನ ಮಕ್ಕಳು ಆಟವಾಡಲು ಕಾಲುವೆ ಹತ್ತಿರ ಹೋಗಿ ಕಾಲುವೆಯಲ್ಲಿ ಬಿದ್ದಿದ್ದರು ಎಂದು ತಿಳಿದುಬಂದಿದೆ.

ಇವರಲ್ಲಿ ಶ್ರೀಧರ ಶಂಕರ ಪುಂಡಿಪಲ್ಲೆ (3),ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8) ಇವರನ್ನು ಕಾಲುವೆಯಿಂದ ಹೊರ ತಗೆಯಲಾಗಿದ್ದು ಆರೋಗ್ಯವಾಗಿದ್ದಾರೆ. ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಇಬ್ಬರು ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿಯ ಸಹಾಯದಿಂದ ಎಲ್ಲರನ್ನು ಹೊರ ತಗೆಯುವಷ್ಟರಲ್ಲಿ ಇಬ್ಬರು ನೀರಿನಲ್ಲಿಯೇ ಸಾವನ್ನಪ್ಪಿದ್ದರು.
ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮಕ್ಕಳು ಸಾವನ್ನಪಿದ ಘಟನೆಯನ್ನು ನೋಡಿ ಗ್ರಾಮಸ್ಥರ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.










