<strong>ಬೆಳಗಾವಿ</strong>: ಲಕ್ಷಣರಹಿತ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ಜಿಲ್ಲೆಯ ಹತ್ತು ತಾಲ್ಲೂಕಿನಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ ಆರಂಭಿಸಲಾಗಿದೆ. ಅದೇ ರೀತಿ ಪ್ರತಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿರುವ 30 ಬೆಡ್ ಕೂಡ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. 10 ತಾಲ್ಲೂಕಿನಲ್ಲಿ ಕೋವಿಡ್ ಕೇರ ಸೆಂಟರ್ ಸ್ಥಾಪನೆ, ಲಕ್ಷಣ ರಹಿತ ರೋಗಿಗಳನ್ನು ಇರಿಸಲಾಗುತ್ತಿದೆ. ಬೈಲಹೊಂಗಲ, ಸವದತ್ತಿ, ರಾಮದುರ್ಗ ಮತ್ತು ಗೋಕಾಕ ನಲ್ಲಿ ಈಗಾಗಲೇ ಲಕ್ಷಣ ರಹಿತರಿಗೆ ಚಿಕಿತ್ಸೆ ಆರಂಭಿಸಲಾಗಿದ್ದು ಅದಕ್ಕೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಗಂಭೀರ ಪ್ರಕರಣ ಹಾಗೂ ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಬಿಮ್ಸ್ ಗೆ ದಾಖಲು ಮಾಡಲಾಗುತ್ತಿದೆ. ಲಕ್ಷಣ ರಹಿತರಿಗೆ ತಾಲ್ಲೂಕು ಮಟ್ಟದಲ್ಲಿ ಹತ್ತು ದಿನಗಳ ಕಾಲ ಸರ್ಕಾರದ ಮಾರ್ಗಸೂಚಿ ಪ್ರಕಾರ ಊಟೋಪಹಾರ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. 768 ಬೆಡ್ ಗಳು ಹತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಲಭ್ಯವಿವೆ. ಖುದ್ದಾಗಿ ಪರಿಶೀಲನೆ ಮಾಡಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನ ಬೆಡ್ ಕಲ್ಪಿಸುವ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ.