ಉತ್ತಮ ಶಿಕ್ಷಣದೊಂದಿಗೆ ಮಕಳಲ್ಲಿ ದೇಶಾಭಿಮಾನ ಬೆಳೆಸಿ:ಗಚ್ಚಿನಮಠದ ಶಿವಬಸವ ಸ್ವಾಮೀಜಿ
- 15 Jan 2024 , 12:46 AM
- Belagavi
- 106
ಅಥಣಿ: ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ದಿಗಾಗಿ ಶಿಕ್ಷಣ ಅವಶ್ಯವಿದ್ದು, ಶಿಕ್ಷಕರು ಪ್ರತಿಯೊಂದು ಮಕ್ಕಳಿಗೂ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ದೇಶಾಭಿಮಾನ ಕಲಿಸಿಕೊಡಬೇಕು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಅವರು ಸ್ಥಳೀಯ ಜೈತೂನ್ ಶಿಕ್ಷಣ ಸಂಸ್ಥೆಯ ಅಮನ್ ಶಾಲೆಯ ಪ್ರಸಕ್ತ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗುವದರಿಂದ ನಮ್ಮ ದೇಶದ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತದೆ. ಶಿವಯೋಗಿಗಳ ಪಾವನಕ್ಷೇತ್ರದಲ್ಲಿ ಜೈತೂನ ಶಿಕ್ಷಣ ಸಂಸ್ಥೆ ಆರಂಭವಾಗಿರುವದು ಸಂತಸದ ಸಂಗತಿಯಾಗಿದೆ. ಈ ಸಂಸ್ಥೆಯು ಎಲ್ಲ ವರ್ಗದ ಜನತೆಗೆ ಶಿಕ್ಷಣ ನೀಡಲು ಸಂಕಲ್ಪ ಹೊಂದಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ವಿದ್ಯಾದೇವತೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ಅಥಣಿ ಪಟ್ಟಣದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಮಾದಾರ ಬಂಧುಗಳು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದು ಖುಷಿ ವಿಚಾರ. ಅವರು ಮುಸ್ಲಿಂ ಧರ್ಮದವರಾಗಿದ್ದರೂ ಜಾತಿ ಬೇದವಿಲ್ಲದೇ ಎಲ್ಲ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಿದ್ದಾರೆ.ಇದರ ಸದುಪಯೋಗವನ್ನು ಅಥಣಿ ಜನರು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಾನುಲ್ಲಾ ಜಮಾದಾರ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಕೂಡಾ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ಹೊಂದಿದ್ದೇವೆ. ಈಗಾಗಲೇ 1 ಎಕರೆ ಜಾಗದಲ್ಲಿ ಸುವ್ಯವಸ್ಥೆ ಕಟ್ಟಡವನ್ನು ನಿರ್ಮಿಸಿದ್ದೇವೆ. ನುರಿತ ಶಿಕ್ಷಕರನ್ನು ಹೊಂದಿರುವ ನಮ್ಮ ಶಾಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು. ಈ ವೇಳೆ ಇಸ್ಲಾಂ ಧರ್ಮ ಗುರುಗಳಾದ ಮೌಲಾನಾ ಜುಬೇರ, ಸಂಸ್ಥೆಯ ಕಾರ್ಯದರ್ಶಿ ಹಾಜಿ ಮುಸ್ತಫಾ ಜಮಾದಾರ, ಹಾಜಿ ಜಾಂಗಿ ಜಮಾದಾರ, ಮುಖಂಡರಾದ ಗಿರೀಶ ಬುಟಾಳಿ,ಗಂಗಪ್ಪಾ ಡೊಡಮನಿ ಇನ್ನೀತರರು ಉಪಸ್ಥಿತರಿದ್ದರು.
ಮುಖ್ಯೋಪಾದ್ಯಾಯ ರಾಹುಲ ಬೆಳ್ಳಂಕಿ ಸ್ವಾಗತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಬಡಕಂಬಿ ನಿರೂಪಿಸಿ ವಂದಿಸಿದರು.










