ಅಂಗನವಾಡಿ, ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡಲು ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ: ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳು ಇದೀಗ ಪೂರ್ಣಪ್ರಮಾಣದಲ್ಲಿ ಆರಂಭಗೊಳ್ಳುತ್ತಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದಲ್ಲದೇ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ವಸತಿ ನಿಲಯಗಳಲ್ಲಿ ಸರಕಾರದ ಮೆನು ಪ್ರಕಾರ ಕಡ್ಡಾಯವಾಗಿ ಊಟೋಪಹಾರ ಒದಗಿಸುವುದರ ಜತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

promotions

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಸರಕಾರದ ಮೆನು ಪ್ರಕಾರ ಕಡ್ಡಾಯವಾಗಿ ಊಟೋಪಹಾರ ಒದಗಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸಬೇಕು. ಹಾಸಿಗೆ-ಹೊದಿಕೆ ಸರಿಯಾಗಿ ನೀಡಬೇಕು.

promotions

ಶೌಚಾಲಯ ವ್ಯವಸ್ಥೆ ಸರಿಯಾಗಿ ನಿರ್ವಹಿಸಬೇಕು. ಸಾಧ್ಯವಾದರೆ ಸೋಲಾರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಊಟೋಪಹಾರದ ಗುಣಮಟ್ಟ ಮತ್ತು ಸೌಕರ್ಯಗಳನ್ನು ಪರಿಶೀಲಿಸುತ್ತೇನೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ, ಸಿಇಓ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ಕೂಡ ವಸತಿನಿಲಯಗಳಿಗೆ ಅನೀರಿಕ್ಷಿತ ಭೇಟಿ ನೀಡಿ, ಸೌಕರ್ಯಗಳನ್ನು ಪರಿಶೀಲಿಸಬೇಕು.

ಪಂಚಾಯಿತಿಗೊoದು ಕೆರೆ ನಿರ್ಮಿಸಲು ಸೂಚನೆ:

ಗ್ರಾಮ ಪಂಚಾಯಿಗೊoದು ಕೆರೆ ಇರಬೇಕು ಎಂಬುದು ಸರಕಾರದ ಆಶಯವಾಗಿದೆ. ಆದ್ದರಿಂದ ಪ್ರತಿ ಗ್ರಾಮಗಳಲ್ಲಿ ಕನಿಷ್ಠ ಒಂದು ಕೆರೆ ಇರಬೇಕು. ಒಂದು ವೇಳೆ ಕೆರೆ ಇರದಿದ್ದರೆ ಹೊಸ ಕೆರೆ ನಿರ್ಮಾಣ ಮಾಡಬೇಕು ಎಂದು ಅತೀಕ್ ತಿಳಿಸಿದರು. ಮುಂದಿನ ಮಳೆಗಾಲದ ವೇಳೆಗೆ ನಿಗದಿತ ಗುರಿ ಪ್ರಕಾರ ಸಸಿಗಳನ್ನು ನೆಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.

ಜಲಜೀವನ ಮಿಷನ್; ಗ್ರಾಮಸ್ಥರ ಸಲಹೆ ಸ್ವೀಕರಿಸಲು ನಿರ್ದೇಶನ:

ಜಲಜೀವನ ಮಿಷನ್ ಯೋಜನೆಗೆ ಸಂಬoಧಿಸಿದoತೆ ಯಾವುದೇ ಹೊಸ ಡಿಪಿಆರ್ ಮಾಡುವುದಕ್ಕಿಂತ ಮುಂಚೆ ಕಡ್ಡಾಯವಾಗಿ ಗ್ರಾಮಸಭೆ ನಡೆಸಬೇಕು; ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆಗಳನ್ನು ಆಧರಿಸಿ ಯೋಜನೆಯನ್ನು ರೂಪಿಸಬೇಕು. ಮುಂಚಿತವಾಗಿ ನಳ ಸಂಪರ್ಕ ಇರುವ ಮನೆಗಳಿಗೆ ಅದೇ ಸಂಪರ್ಕವನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ನ.8 ರಿಂದ ಅಂಗನವಾಡಿ ಆರಂಭ:

ಇದೇ ನ.8 ರಿಂದ ಅಂಗನವಾಡಿಗಳನ್ನು ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಪ್ರಾರಂಭಿಸಲಾಗುತ್ತಿದೆ. ಉಪಾಹಾರವನ್ನು ಮನೆಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ತಿಳಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಸರಕಾರದ ಮಾರ್ಗಸೂಚಿ ಪ್ರಕಾರ ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ್ ಬಗಲಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Read More Articles