ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಲಾಭದಾಯಕ ಹುದ್ದೆ ಅಲ್ಲ,: ಪ್ರೊ.ಸಿ.ಕೆ.ರಾಮೇಗೌಡ

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಅಲಂಕಾರಿಕ ಮತ್ತು ಲಾಭದಾಯಕ ಹುದ್ದೆ ಅಲ್ಲ, ಸೇವಾ ಮನೋಭಾವ ಇರುವಂತಹ ಹುದ್ದೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್‍ನ್ನು ಕನ್ನಡಿಗರ ಪರಿಷತ್‍ನ್ನಾಗಿ ಮಾಡಬೇಕು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಪ್ರೊ.ಸಿ.ಕೆ.ರಾಮೇಗೌಡ ಹೇಳಿದರು.

promotions

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಕೆ.ರಾಮೇಗೌಡ ಕಳೆದ ನಾಲ್ಕು ದಶಕಗಳಿಂದ ಕನ್ನಡದ ಪರಿಚಾರಕನಾಗಿ ನಾಡು-ನುಡಿಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ನಾನು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು ಆಯ್ಕೆಯಾದರೆ ಕಟಿಬದ್ಧತೆಯಿಂದ ಕೆಲಸವನ್ನು ಮಾಡುತ್ತೇನೆಂದು ಪ್ರಮಾಣೀಕರಿಸುತ್ತೇನೆ.

promotions

12ನೇ ಶತಮಾನದಲ್ಲಿ ಬಸವಣ್ಣನವರು ನಿರ್ಮಿಸಿದ ಮಹಾಮನೆಯಂತೆ ಕನ್ನಡ ಸಾಹಿತ್ಯ ಪರಿಷತ್‍ನ್ನು ಕನ್ನಡಿಗರ ಮಹಾಮನೆಯನ್ನಾಗಿ ಮಾಡಬೇಕು ಎನ್ನುವುದೇ ನನ್ನ ಉದ್ದೇಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಚಳವಳಿಯ ಆಶಯಗಳು ಮತ್ತು ಚಿಂತಕರ ಆಶಯಗಳನ್ನು ಸಮನ್ವಯಗೊಳಿಸಿ ಕೆಲಸ ಮಾಡುವಂತೆ, ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ.ಬಿ.ಎಸ್.ಗವಿಮಠ, ಡಾ.ಬಸವರಾಜ್ ಜಗಜಂಪಿ, ಯ.ರು.ಪಾಟೀಲ್, ಮಹಾಂತೇಶ ರಣಗಟ್ಟಿಮಠ, ಬಸವರಾಜ್ ಗಾರ್ಗಿ, ಎಂ.ವೈ.ಮೆನಶಿನಕಾಯಿ, ಕಸಾಭ ವಿಶ್ವಸ್ಥ ಮಂಡಳಿ ಬೆಳಗಾವಿ ಗೌರವ ಕಾರ್ಯದರ್ಶಿ ಆರ್.ಬಿ.ಕಟ್ಟಿ, ಕಸ್ವಾವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಹೂಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles