ಕೋವಿಡ್-19 ದಿಂದ ಮೃತ ಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ಖಂಡಿಸಿ ಸ್ಥಳೀಯರ ಪ್ರತಿಭಟನೆ
- 19 Dec 2023 , 11:15 AM
- Haveri
- 114
ಹಾವೇರಿ : ಜಿಲ್ಲೆಯ ರಾಣೇಬೆನ್ನುರ ತಾಲೂಕಾಡಳಿತದ ವತಿಯಿಂದ ತಮ್ಮ ವಾಸಸ್ಥಳದ ಸಮೀಪದ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗೆಯಲ್ಲಿ ಯಾವುದೇ ಕಾರಣಕ್ಕೂ ಕೋವಿಡ್‍ನಿಂದ ಮೃತಪಟ್ಟವರ ಶವ ಸಂಸ್ಕಾರ ನಡೆಸಬಾರದು ಎಂದು ತಾಲೂಕಿನ ಗಂಗಾಜಲ, ಬಸಲಿಕಟ್ಟಿ ತಾಂಡಾ ಮತ್ತು ಗೋವಿಂದ ಬಡಾವಣೆ ನಿವಾಸಿಗಳು ಗುರುವಾರ ದಿಢೀರ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಹಾವೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ನಗರದ ಮಹಿಳೆಯ ಶವ ಸಂಸ್ಕಾರಕ್ಕೆ ತಾಲೂಕು ಹಾಗೂ ಜಿಲ್ಲಾ ಆಡಳಿತ ಮುಂದಾಗಿತ್ತು ಇದು ಸ್ಥಳೀಯ ವಾಸಿಗಳಲ್ಲಿ ಆಕ್ರೋಶ ಉಂಟು ಮಾಡಿದ್ದು ಪ್ರತಿಭಟನೆ ನಡೆಸಲು ಕಾರಣವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯ್ಕ ಮಹಾಮಾರಿ ಕೊರೊನಾದಿಂದ ಮೃತಪಟ್ಟವರ ವ್ಯಕ್ತಿಗಳನ್ನು ಇಲ್ಲಿ ಅಂತ್ಯಕ್ರಿಯೆ ನಡೆಸುತ್ತಿರುವುದರಿಂದ ಇಲ್ಲಿನ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಸರಕಾರಕ್ಕೆ ಸೇರಿದ ಜಾಗೆಯಾಗಿದ್ದರೂ ಈ ಪ್ರದೇಶದ ಸಮೀಪದಲ್ಲಿ ಮೂರು ಪ್ರಮುಖ ತಾಂಡಾಗಳ ಜನರು ವಾಸವಾಗಿದ್ದಾರೆ. ಇಲ್ಲಿನ ಜನರು ದನ, ಕರುಗಳನ್ನು ಮೇಯಿಸಲು ತೆರಳಿದಾಗ ಸುಖಾಸುಮ್ಮನೇ ಕೊರೊನಾಕ್ಕೆ ತುತ್ತಾಗುವ ಸಂಭವವಿದೆ ಆದ್ದರಿಂದ ಅಧಿಕಾರಿಗಳು ಬೇರೆ ಯಾವುದಾದರೂ ಜನವಸತಿಯಿಲ್ಲದ ಸ್ಥಳವನ್ನು ವ್ಯವಸ್ಥೆ ಮಾಡಲಿ ಎಂದು ಮನವಿ ಮಾಡಿದರು. ಪೊಲೀಸ್ ಅಧಿಕಾರಿಗಳಾದ ಸಿಪಿಐ ಲಿಂಗರಾಜ ನೆಗಳೂರು, ಪಿಎಸ್‍ಐಗಳಾದ ಮೇಘರಾಜ್, ಮಂಜುನಾಥ ಕುಪ್ಪೇಲೂರು ಪ್ರತಿಭಟನಾಕಾರರ ಜತೆ ಮೂರು ನಾಲ್ಕು ಸುತ್ತು ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಸ್ಥಳೀಯ ಜನರ ಒತ್ತಾಯದಿಂದ ಅನಿವಾರ್ಯವಾಗಿ ಕೊರೊನಾದಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರವನ್ನು ಬೇರೆ ಜಾಗೆಯಲ್ಲಿ ನೆರವೇರಿಸಲಾಯಿತು. ಜಿಲ್ಲಾಡಳಿತ ಸೂಚನೆ ಬರುವರಿಗೂ ರಸ್ತೆಯಲ್ಲಿಯೆ ಸುಮಾರು ಎರಡು ಗಂಟೆಗಳ ಕಾಲ ಆಂಬ್ಯುಲೆನ್ಸ್ ನಿಂತಿತು ತದನಂತರ ಮೃತ ದೇಹವನ್ನು ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋದ ನಂತರ ಪತ್ರಿಭಟನೆ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಲಮಾಣಿ, ಅಶೋಕ ಪೂಜಾರ, ಶಶಿಧರ ನಾಯ್ಕ್, ಆಶಪ್ಪ ಲಮಾಣಿ, ಓಮ್ಲಪ್ಪ ಲಮಾಣಿ, ಶಿವಪ್ಪ ಲಮಾಣಿ, ಸಂತೋಷ ಲಮಾಣಿ, ಬೀರಪ್ಪ ಪೂಜಾರ, ದುರಗಪ್ಪ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.












