ವಿಜ್ಞಾನಿಗಳಿಂದ ರೈತರಿಗೆ ಅನ್‍ಲೈನ್‍ನಲ್ಲಿ ಮಾಹಿತಿ
- 15 Jan 2024 , 2:07 AM
- Haveri
- 159
ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಗ್ರಾಮೀಣ ಭಾಗದ ರೈತರ ಅನುಕೂಲವಾಗುವ ದೃಷ್ಠಿಯಿಂದ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ರೈತರಿಗೆ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಶೋಕ.ಪಿ ತಿಳಿಸಿದ್ದಾರೆ. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವದ್ಯಾಲಯದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ ಹಾಗೂ ಜಿಲ್ಲಾ ತರಬೇತಿ ಕೇಂದ್ರ, ದೇವಿಹೊಸೂರ ಇವರ ಸಂಯುಕ್ತ ಆಶ್ರಯದಲ್ಲಿ ಹತ್ತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಆನ್‍ಲೈನ್ ತರಬೇತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಖರ್ಚಾಗಿರುವ ಪೋಷಕಾಂಶಗಳನ್ನು ಮತ್ತೆ ಮಣ್ಣಿಗೆ ಸೇರಿಸಬೇಕು. ಲಘು ಪೋಷಕಾಂಶಗಳ ಕೊರತೆಯಿದ್ದರೆ ಇಳುವರಿ ಕುಂಠಿತವಾಗುತ್ತದೆ.

ರಾಸಾಯನಿಕ ಯುಗದಿಂದಲೇ "ಯೂರಿಯಾ" ಗೊಬ್ಬರ ಅತ್ಯುಪಯುಕ್ತವೆನಿಸಿದೆ. ಆದರೆ ಬಳಕೆಯಲ್ಲಿ ಮಾತ್ರ ಮಿತಿ ಇರಬೇಕು. ಯೂರಿಯಾದಿಂದ ಸಿಗುವ ಸಾರಜನಕದ ಸಮರ್ಪಕ ನಿರ್ವಹಣೆಯಿಂದ ಇಳುವರಿಯನ್ನು ಹೆಚ್ಚಿಸಲು ಸಾಧ್ಯ ಎಂದರು. ಮುಂಗಾರು ಹಂಗಾಮಿನ ಕ್ಷೇತ್ರಗಳಲ್ಲಿ ಯಾವುದೇ ಬೆಳೆಯಿರಲಿ, ರೈತರು ಮಳೆ ಬಂದೊಡನೆ ಬೆಳೆಗೆ ಮೇಲು ಗೊಬ್ಬರವಾಗಿ ಯೂರಿಯಾ ಹಾಕುವುದು ರೂಢಿಯಾಗಿದೆ. ಕೆಲವರು ಎಕರೆಗೆ ಅರ್ಧ ಚೀಲ ಯೂರಿಯಾ ಹಾಕಿದರೆ ಇನ್ನು ಕೆಲವರು ಒಂದು-ಎರಡು ಚೀಲದವರೆಗೆ ನೀಡುವುದನ್ನು ನಾವು ನೋಡಿದ್ದೇವೆ. ಇದು ಅವಶ್ಯವೇ? ಎಂಬುದೇ ಈಗಿನ ಪ್ರಶ್ನೆ. ಸಾಮಾನ್ಯವಾಗಿ ಯಾವುದೇ ಒಂದು ಸಸ್ಯದ ಬೆಳವಣಿಗೆಯಲ್ಲಿ ಸುಮಾರು 16 ರಿಂದ 20 ರಷ್ಟು ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಂಶೋಧನೆಯಿಂದ ಸಾಭೀತಾಗಿದೆ. ಸಾರಜನಕ, ರಂಜಕ, ಪೋಟ್ಯಾಷ್, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಗಂಧಕ, ಕಬ್ಬಿಣ, ಸತುವು, ತಾಮ್ರ, ಬೋರಾನ್, ಮ್ಯಾಂಗನೀಜ್, ಮೊಲಿಬ್ಡಿನಂ.

ಈಎಲ್ಲ ಪೋಷಕಾಂಶಗಳ ಪೈಕಿ ಸಾರಜನಕವು ಸಸ್ಯದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾರಜನಕವನ್ನು ಸಸ್ಯ, ಪ್ರಾಣಿಜನ್ಯ ಮೂಲಗಳಿಂದಲೂ ಸಸ್ಯವು ಪಡೆದುಕೊಳ್ಳಬಹುದು. ಆದರೆ ಮಣ್ಣಿನಲ್ಲಿ ಸಸ್ಯದ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ದೊರೆಯುವುದು ನಿಧಾನ. ಈ ನಿಟ್ಟಿನಲ್ಲಿ ಸಂಶೋಧನೆಯ ಫಲವಾಗಿ ಸಾರಜನಕ ಒದಗಿಸುವ ರಾಸಾಯನಿಕ ಗೊಬ್ಬರವನ್ನು ಆವಿಷ್ಕಾರ ಮಾಡಲಾಯಿತು. ಸಾರಜನಕ ಒದಗಿಸುವ ರಾಸಾಯನಿಕ ಗೊಬ್ಬರವನ್ನು `ಯೂರಿಯಾ' ಎಂದು ಹೆಸರಿಸಲಾಯಿತು ಎಂದರು. ಯೂರಿಯಾ ಭೂಮಿಗೆ ನೀಡಿದಾಗ ಮಣ್ಣಿನಲ್ಲಿ ಇರುವ ಸಾವಯವ ಇಂಗಾಲ ಬಹು ಬೇಗನೆ ಖಾಲಿ ಆಗುವುದರಿಂದ ಭೂಮಿಯ ಫಲವತ್ತತೆಯೂ ಹಾಳಾಗುವುದು. ಆದ್ದರಿಂದ ಸಾರಜನಕವನ್ನು ಎಲೆಗಳಿಗೆ ಸಿಂಪರಣೆ ಮೂಲಕ ನೀಡಿದರೆ ಹೆಚ್ಚು ಒಳಿತು. ಸಾರಜನಕ ಉತ್ತಮ ಬಳಕೆ ಆಗಬೇಕಾದರೆ ಪೂರಕವಾಗಿ ರಂಜಕ ಮತ್ತು ಪೊಟ್ಯಾಷ್ ಇರುವುದು ಅವಶ್ಯ. ಅದಕ್ಕಾಗಿ ನೀರಿನಲ್ಲಿ ಕರಗುವ ರಸಗೊಬ್ಬರ 19:19:19 ಉಪಯೋಗ ಮಾಡುವುದು ಅತ್ಯಂತ ಸೂಕ್ತ. ಇದಲ್ಲದೆ ಎಂ.ಎ.ಪಿ (ಮಾನೊ ಅಮೋನಿಯಂ ಫಾಸ್ಫೇಟ್) ಹಾಗು ಪೊಟ್ಯಾಸಿಯಂ ನೈಟ್ರೇಟ್ (13:0:45) ನೀರಿನಲ್ಲಿ ಕರುಗವ ರಸಗೊಬ್ಬರಗಳನ್ನು ಸಿಂಪರಣೆಗೆ ಬಳಸಬಹುದು ಎಂದರು. ಮೆಕ್ಕೆಜೋಳದಲ್ಲಿ ಯೂರಿಯಾ ಮೇಲುಗೊಬ್ಬರವನ್ನು ನೀಡುವುದರ ಬದಲು 19:19:19 ಅಥವಾ ಎಂ.ಎ.ಪಿ. ನೀರಿನಲ್ಲಿ ಕರಗುವ ರಸಗೊಬ್ಬರ ಉಪಯೋಗ (ಪ್ರತಿ ಲೀಟರ್ ನೀರಿಗೆ 5 ಗ್ರಾಂ ಕರಗಿಸಿ ಸಿಂಪರಣೆ) ಮಾಡಿದರೆ ಉತ್ತಮ ಫಲಿತಾಂಶ ಕಂಡು ಬಂದಿರುವುದು ದಾಖಲಾಗಿದೆ.
ಹತ್ತಿಯಲ್ಲಿ ಪೋಟ್ಯಾಸಿಯಂ ನೈಟ್ರೇಟ್ (ಪ್ರತಿ ಲೀಟರ್ ನೀರಿಗೆ 10 ಗ್ರಾಂ ಕರಗಿಸಿ) ಸಿಂಪರಣೆ ಮಾಡುವುದರಿಂದ ಕಾಯಿ ಸಂಖ್ಯೆ ಮತ್ತು ಗಾತ್ರ ಹೆಚ್ಚಿ, ಹತ್ತಿ ನಾರಿನ ಗುಣಮಟ್ಟವೂ ಹೆಚ್ಚುವುದು ಕಂಡು ಬಂದಿದೆ. ಈ ಗೊಬ್ಬರಗಳ ಬಳಕೆಯನ್ನು 2-3 ಸಾರಿ ಹದಿನೈದು ದಿನಗಳಿಗೊಮ್ಮೆ ಮಾಡಬೇಕಾಗುವುದು. ಪ್ರತಿ ಎಕರೆಗೆ ಪ್ರತಿ ಸಾರಿ ಒಂದು ಕೆ.ಜಿ. ಗೊಬ್ಬರ ಸಾಕಾಗುವುದು. ಈ ಸಿಂಪರಣಾ ರಸಗೊಬ್ಬರಗಳ ಬೆಲೆಯು ಪ್ರತಿ ಕೆ.ಜಿಗೆ ಸುಮಾರು ರೂ. 100 ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಲ್ಲಪ್ಪ ಎಂಬ ರೈತರು ರಸಗೊಬ್ಬರಗಳನ್ನು ನಂಬಿಕೊಳ್ಳದೆ ಸಾವಯವ ಗೊಬ್ಬರಗಳಾದ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಬಳಸಬೇಕು ಹಾಗೂ ಒಂದೇ ಬೆಳೆಗೆ ಅಂಟಿಕೊಳ್ಳದೆ ವಿವಿಧ ರೀತಿಯ ಬೆಳೆಗಳನ್ನು ಒಳಗೊಂಡ ಸಮಗ್ರ ಕೃಷಿ ಪದ್ಧತಿಯ ಕಡೆಗೆ ಗಮನ ಹರಿಸಬೇಕೆಂದು ರೈತರಿಗೆ ತಿಳಿಸಿದರು.
ಇನ್ನುಳಿದ ರೈತರು ರಸಗೊಬ್ಬರಗಳ ಬಳಸುವ ಬಗ್ಗೆ ಹಾಗೂ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯ ಬಗ್ಗೆ ಚರ್ಚಿಸಿ ಸಲಹೆ ಪಡೆದುಕೊಂಡರು. ಸುಮಾರು 85 ರೈತ ಒಳಗೊಂಡಂತೆ ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ತಮ್ಮ ಕ್ಷೇತ್ರಗಳ ಬೆಳೆಗಳ ಬಗ್ಗೆ ಚರ್ಚಿಸಿ ತಾಂತ್ರಿಕ ಸಲಹೆಗಳನ್ನು ಪಡೆದರು. ನಿವೃತ್ತ ಜಂಟಿ ಕೃಷಿ ನಿರ್ದೇಶಕ ಡಾ. ಆರ್. ಜಿ. ಗೊಲ್ಲರ್, ಹಾವೇರಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ, ಜಿಲ್ಲಾ ತರಬೇತಿ ಘಟಕದ ಮುಖ್ಯಸ್ಥ ವೀರೇಶ ಸೇರಿದಂತೆ ಸಿಬ್ಬಂದಿ ಆನ್‍ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










