ರೋಗಿಗಳ ತಪಾಸಣೆಗೆ ಹಿಂದೇಟು ಹಾಕುತ್ತಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
- 15 Jan 2024 , 2:12 AM
- Haveri
- 102
ರಾಣೇಬೆನ್ನೂರ: ತಾಲೂಕಿನಲ್ಲಿ ಕೊರೊನಾ ಹೊರತುಪಡಿಸಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ತಪಾಸಣೆಗೆ ಹಿಂದೇಟು ಹಾಕುತ್ತಿರುವ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಗುರುವಾರ ಉಪ ತಹಸೀಲ್ದಾರ ಎಂ.ಎನ್.ಹಾದಿಮನಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರವೀಂದ್ರಗೌಡ ಪಾಟೀಲ ಮಾತನಾಡಿ, ಕೊರೊನಾ ನೆಪದಿಂದ ತಾಲೂಕಿನ ಅನೇಕ ಖಾಸಗಿ ಆಸ್ಪತ್ರೆಯ ವೈದ್ಯರುಗಳು ಹಾಗೂ ಸರ್ಕಾರಿ ವೈದ್ಯರುಗಳು ಇನ್ನಿತರ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳ ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ರೋಗಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ್ ತರುವಂತೆ ಕಳುಹಿಸುತ್ತಿದ್ದಾರೆ. ಆದರೆ ಕೋವಿಡ್ ವರದಿ ಬರಲು 10-12 ದಿನ ತಗಲುತ್ತದೆ. ಇದರಿಂದ ಹೃದಯ ಸಂಬಂಧಿ, ಮಧುಮೇಹ, ಕಿಡ್ನಿ(ಡಯಾಲಿಸಸ್) ನಂತಹ ಮುಂತಾದ ರೋಗಗಳಿಂದ ಬಳಲುತ್ತಿರುವವರಿಗೆ ತಾತ್ಕಾಲಿಕ ಚಿಕಿತ್ಸೆ ಸಿಗದೆ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈಗಾಗಲೇ ಅನೇಕ ಜನರು ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ಆದ್ದರಿಂದ ತಕ್ಷಣ ರಿಪೋರ್ಟ್ ಸಿಗುವ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡುವ ವ್ಯವಸ್ಥೆಯನ್ನು ಸ್ಥಳೀಯವಾಗಿ ಒದಗಿಸಬೇಕು ಹಾಗೂ ನಿಲ್ರ್ಲಕ್ಷ್ಯ ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳು ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಲಮಾಣಿ, ಜಯಣ್ಣ ಮಾಗನೂರ, ಡಿಳ್ಳೇಪ್ಪ ಸತ್ಯಪ್ಪನವರ, ಬಿ.ಕೆ.ರಾಜನಹಳ್ಳಿ, ಹರಿಹರಗೌಡ ಪಾಟೀಲ ಸೇರಿದಂತೆ ಮತ್ತಿತರು ಇದ್ದರು.











