ರೈತರಿಗೆ ಸಮರ್ಪಕ ಯೂರಿಯಾ ಗೊಬ್ಬರ ಪೂರೈಸಲು ಮನವಿ
- 14 Jan 2024 , 9:32 PM
- Haveri
- 127
ರಾಣೇಬೆನ್ನೂರ: ತಾಲೂಕಿನ ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಪೂರೈಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಕಾರ್ಯಕರ್ತರು ಗುರುವಾರ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರು ಹೆಚ್ಚಾಗಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದು. ಪ್ರಸುತ್ತ ಸಮಯದಲ್ಲಿ ಹೊಲಗಳಿಗೆ ಯೂರಿಯಾ ಗೊಬ್ಬರದ ಅಗತ್ಯ ಉಂಟಾಗಿದೆ. ಆದರೆ ಸಮರ್ಪಕ ದಾಸ್ತಾನು ಇಲ್ಲದ ಕಾರಣ ರೈತರು ತಾವು ಬಿತ್ತನೆ ಮಾಡಿದ ಫೈರಿನ ಸಂರಕ್ಷಣೆಗೆಗಾಗಿ ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುವಂತಾಗಿದೆ. ಈ ಹಿಂದೆ ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿಯೇ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ನಡೆದ ಗಲಾಟೆಯಲ್ಲಿ ಇಬ್ಬರು ರೈತರು ಪ್ರಾಣತ್ಯಾಗ ಮಾಡಿದ್ದರು.

ಆದ್ದರಿಂದ ಅಂತಹ ಘಟನೆ ಪುನರಾವರ್ತನೆಯಾಗದಂತೆ ತಾಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಪೂರೈಸುವ ವ್ಯವಸ್ಥೆ ಮಾಡಬೇಕು. ಇನ್ನು ಕೆಲವೆಡೆ ಯೂರಿಯಾ ಗೊಬ್ಬರವನ್ನು ಅಗ್ರೋ ಕೇಂದ್ರಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಲಾಗುತ್ತಿದೆ. ರೈತರಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಕೂಡಲೇ ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು. ಕೃಷಿ ಅಧಿಕಾರಿಗಳು ಇದರ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನಿಗದಿತ ದರದಲ್ಲಿ ಗೊಬ್ಬರ ದೊರೆಯುವಂತೆ ಮಾಡಬೇಕು. ಒಂದು ವಾರದೊಳಗಾಗಿ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ವಸಂತ ಕಚ್ಛರಬಿ, ಸಿದ್ದಪ್ಪ ಬಣಕಾರ, ಪ್ರಕಾಶ ನಾಯಕರ, ನಾಗರಾಜ ಮಣೇಗಾರ, ಪ್ರವೀಣ ಸಣ್ಣನೀಲಪ್ಪನವರ, ಬಸವರಾಜ ಕುರುಬರ, ನಿಂಗಪ್ಪ ಕೆ.ಬಿ., ಮಂಜು ಕಚ್ಛರಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.











