ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರ ಕೊರತೆ ಎದ್ದು ಕಾಣುತ್ತಿದೆ:ಮಂಜನಗೌಡ ಪಾಟೀಲ
- 15 Jan 2024 , 12:53 AM
- Haveri
- 115
ಹಾವೇರಿ: ರಾಣೇಬೆನ್ನೂರ ಗೃಹ ಸಚಿವರು ಹಾಗೂ ಕೃಷಿ ಸಚಿವರ ತವರು ಜಿಲ್ಲೆಯಲ್ಲಿಯೇ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ರೈತರ ಸಮಸ್ಯೆಯನ್ನು ಪರಿಹರಿಸಬೇಕಾದ ತಾಲೂಕಿನ ಶಾಸಕರು ನಿಷ್ಕಯಗೊಂಡತೆ ಕಾಣುತ್ತಿದೆ ಎಂದು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ ಆರೋಪಿಸಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರದಿಂದ ಉತ್ತಮ ಮಳೆಯಾಗುತ್ತಿದೆ. ಬೆಳೆದು ನಿಂತ ರೈತರ ಫಸಲಿಗೆ ತುರ್ತಾಗಿ ಯೂರಿಯಾ ಗೊಬ್ಬರ ಬೇಕಾಗಿದೆ. ಆದರೆ ಸರಕಾರ ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಮಾಡದ ಕಾರಣ ಗೊಬ್ಬರದ ಅಭಾವ ಉಂಟಾಗಿದೆ. ಮಳೆಯ ಕಾರಣ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆಗಳು ಕುಸಿಯುತ್ತಿವೆ. ಆದರೆ ಸ್ಥಳೀಯ ಶಾಸಕರು ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಲಾಕ್‍ಡೌನ್ ಸಮಯದಲ್ಲಿ ಸರಕಾರ ನೀಡಿದ ಕಿಟ್‍ಗಳನ್ನು ವಿತರಿಸಿ ಫೋಟೊಕ್ಕೆ ಫೋಸು ನೀಡಿ ಸುಮ್ಮನಾಗಿದ್ದಾರೆ ಹೊರತು ಇಲ್ಲಿಯವರಿಗೂ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ 2019ರಲ್ಲಿ ಅತಿವೃಷ್ಟಿಯಿಂದ ಕುಸಿತಗೊಂಡ ಮನೆಗಳಿಗೆ ಸರಕಾರ ಘೋಷಿಸಿದ ಐದು ಲಕ್ಷ ಪರಿಹಾರ ಇದುವರೆಗೂ ದೊರಕಿಲ್ಲ. ಅಂತಹುದರಲ್ಲಿ ಮುಖ್ಯಮಂತ್ರಿಗಳು ಮತ್ತೇ ಅದೇ ಘೋಷಣೆಯನ್ನು ಹೊರಡಿಸಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಲೇವಡಿ ಮಾಡಿದರು.

ಕೊರೊನಾ ನೆಪದಿಂದ ತಾಲೂಕಿನ ಹಲವಾರು ಖಾಸಗಿ ವೈದ್ಯರುಗಳು ಅನ್ಯ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳ ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ರೋಗಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ್ ತರುವಂತೆ ಕಳುಹಿಸುತ್ತಿದ್ದಾರೆ. ಆದರೆ ಕೋವಿಡ್ ವರದಿ ಬರಲು 10-12 ದಿನ ತಗಲುತ್ತದೆ. ಇದರಿಂದ ಹೃದಯ ಸಂಬಂಧಿ, ಮಧುಮೇಹ, ಕಿಡ್ನಿ ಮುಂತಾದ ರೋಗಗಳಿಂದ ಬಳಲುತ್ತಿರುವವರಿಗೆ ತಾತ್ಕಾಲಿಕ ಚಿಕಿತ್ಸೆ ಸಿಗದೆ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾಲೂಕು ಆಡಳಿತ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ, ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ದಿಳ್ಳೇಪ್ಪ ಅಣ್ಣೇರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು .










