ಗೋವಿನ ಜೋಳದಲ್ಲಿ ಮಿಡತೆ ಹಾವಳಿಯನ್ನು ತಡೆಯಲು ಕೃಷಿ ಸಹಾಯಕರಿಂದ ರೈತರಿಗೆ ಸೂಕ್ತ ಮಾರ್ಗದರ್ಶನ

  • 15 Jan 2024 , 12:13 AM
  • Haveri
  • 129

ಬ್ಯಾಡಗಿ: ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ಗೋವಿನ ಜೋಳದ ಹೊಲದಲ್ಲಿ ಮಿಡತೆಗಳ ಹಾವಳಿ ಹೆಚ್ಚಿರುವ ಹಿನ್ನಲೆಯಲ್ಲಿ ಕೃಷಿ ಸಹಾಯಕ ನಿರ್ಧೆಶಕ ಬಸವರಾಜ ಮರಗಣ್ಣನವರ ಬೇಟಿ ನೀಡಿ ಬೆಳೆ ಪರಿಶೀಲಿಸಿದರು. ಗ್ರಾಮದ ಕ್ವಾಟಿಗುಡ್ಡದ ಬಳಿ ರೈತ ಚನ್ನಬಸಪ್ಪ ಬ್ಯಾಡಗಿ ಎಂಬುವರಿಗೆ ಸೇರಿದ 3 ಎಕರೆ ಹೊಲದಲ್ಲಿ ಎರಡು ದಿನಗಳಿಂದ ಮಿಡತೆಗಳ ಹಿಂಡು ದಾಳಿಯಿಟ್ಟಿದ್ದು, ಸಾಕಷ್ಟು ಗೋವಿನ ಜೋಳ ತಿಂದು ಹಾಳುಮಾಡಿವೆ. ಹೀಗಾಗಿ ಸಾಕಷ್ಟು ಆತಂಕದಲ್ಲಿ ಮುಳುಗಿದ್ದರು. ಇಡಿ ಹೊಲದ ತುಂಬ ಎಲ್ಲಿನೋಡಿದರೂ ಹಿಂಡುಹಿಂಡಾಗಿ ಮಿಡತೆಗಳು ಕಾಣುತ್ತಿದ್ದವು. ಹೀಗಾಗಿ ರೈತನಿಗೆ ಸೂಕ್ತ ನಿರ್ದೇಶನ ನೀಡಲು ಕೃಷಿ ಇಲಾಖೆ ತಂಡ ತೆರಳಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಸಲಹೆ ನೀಡಿತು. ಮಿಡತೆ ನಿಯಂತ್ರಣಕ್ಕೆ ಔಷಧಿ: ಕೃಷಿ ಸಹಾಯಕ ನಿರ್ಧೆಶಕ ಬಸವರಾಜ ಮರಗಣ್ಣನವರ ಮಾತನಾಡಿ, ಜಿಟಿಜಿಟಿ ಮಳೆಗೆ ಚಿಟ್ಟೆ ಹಾಗೂ ಮಿಡತೆಗಳು ಸಹಜವಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿವೆ.

promotions

ರೈತರು ಸೈನಿಕ ಹುಳು, ಮಿಡತೆಯಂತಹ ಕೀಟಗಳು ಕಾಣಿಸಿಕೊಂಡಲ್ಲಿ ಯಾವುದೆ ಆತಂಕ ಪಡುವ ಅಗತ್ಯವಿಲ್ಲ. ಮೊದಲು ಹುಳುಗಳು ಯಾವ ಜಾತಿಗೆ ಸೇರಿದ್ದು ಎಂಬುದನ್ನು ಖಚಿತಪಡಿಸಿಕೊಂಡು ಇಲಾಖೆ ಸಲಹೆ ಪಡೆಯಬೇಕು. ಮಿಡತೆಗಳ ನಿಯಂತ್ರಣಕ್ಕೆ ಪ್ರತಿಲೀಟರ್ ನೀರಿಗೆ 0.3 ಗ್ರಾಮ ಇಮಾಮೆಕ್ಟೀನ್ ಬೆಂಜೋಯೇಟ್ ಬೆರೆಸಿ ಸಿಂಪಡಿಸಬೇಕು. ಸಿಂಪರಣೆಗೂ ಮುನ್ನ ಪ್ರತಿ ಮೂರು ಸಾಲುಗಳನ್ನು ಬಿಟ್ಟು ಗೋವಿನಜೋಳದ ಚಂಡಿ ಕತ್ತರಿಸಿದಲ್ಲಿ ಸಿಂಪರಣೆಗೆ ಅನುಕೂಲವಾಗಲಿದೆ. ಇಲ್ಲವೆ ಕಾರ್ಬಾರಿಲ್, ಮೆಲಾಥಿನ್ ಶೇ.50 ನ್ನು 2 ಮೀ.ಲೀಟರನ್ನು ಪ್ರಮಾಣದಲ್ಲಿ ಬೆರೆಸಿಕೊಂಡು ಔಷಧಿ ಕ್ಯಾನಗೆ 5 ಎಂ.ಎಲ್ ಹಾಕಿ ಸಿಂಪಡಿಸಬಹುದು. ಔಷಧಿ ಸಿಂಪರಣೆಯನ್ನು ತಂಪು ಹೊತ್ತಿನಲ್ಲಿ ಮಾಡಬೇಕು. ರೈತರು ಅಂತರ್ಜಾಲದಲ್ಲಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಹಾಯಕ ಅಧಿಕಾರಿ ಎಂ. ಮಂಜುನಾಥ, ರೈತ ನಿಂಗಪ್ಪ ಅಗಡಿ ಇದ್ದರು.

promotions

Read More Articles