ಕಾಯ್ದೆ ತಿದ್ದುಪಡಿಗಳನ್ನು ವಾಪಾಸ ಪಡೆಯುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ
- 14 Jan 2024 , 9:32 PM
- Haveri
- 114
ಶಿಗ್ಗಾವಿ: ಅವೈಜ್ಞಾನಿಕ ಭೂಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ್ ಎಸ್.ಸಿ.ಭಂಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ತಿದ್ದುಪಡಿ ಕಾಯ್ದೆಯಿಂದ ನಿಜವಾದ ರೈತರಿಗೆ ಅನ್ಯಾಯವಾಗಲಿದೆ. ರಾಜ್ಯ ಸರಕಾರ ತಕ್ಷಣ ತಿದ್ದುಪಡಿ ಕಾಯ್ದೆ ವಾಪಾಸ್ ಪಡೆಯಬೇಕು. ರಾಜ್ಯಪಾಲರು ಸರಕಾರಕ್ಕೆ ಈ ಕುರಿತಂತೆ ಸಲಹೆ ನೀಡಬೇಕು. ಅತೀವೃಷ್ಟಿ ಸಂಕಷ್ಟದಲ್ಲಿ ಸಿಲುಕಿದ ರಾಜ್ಯದ ಜನರಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಧಿಕ್ಕಾರ ಕೂಗಿದ ಕಾರ್ಯಕರ್ತರು, ಕರೊನಾ ವೈರಸ್ ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕರೊನಾ ನೆಪದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ. ಈ ಭ್ರಷ್ಟಾಚಾರದ ತನಿಖೆ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆದೇಶ ಮಾಡಬೇಕು. ಕರೊನಾ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ 8 ಇಲಾಖೆಗಳ ಮೂಲಕ ಖರೀದಿಸಿದ ಸಾಮಗ್ರಿಗಳಲ್ಲಿ 4167 ಕೋಟಿ ಅವ್ಯವಹಾರ ಮಾಡಿದೆ. ತನಿಖೆ ಕೈಗೊಂಡು ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಎನ್.ಎಮ್.ವೆಂಕೋಜಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿದರು. ವಕ್ತಾರ ಮಂಜುನಾಥ ಮಣ್ಣಣ್ಣವರ, ಮಾಲತೇಶ ಸಾಲಿ, ತಹಮಿದ ಖಾಜಿ, ರಾಜೇಶಕಮ್ಮಾರ, ಹನುಮಂತಪ್ಪ ಬಂಡಿವಡ್ಡರ, ಪಿರೋಜ ಕಾಮನಹಳ್ಳಿ, ಚನ್ನುಕುಮಾರದೇಸಾಯಿ, ಅಶೋಕ ಗಾಣಿಗೇರ, ಈರನಗೌಡ್ರ ದೊಡ್ಡನಗೌಡ್ರ, ರುದ್ರಗೌಡ್ರ ಪಾಟೀಲ, ರವಿ ವಾಲ್ಮೀಕಿ, ಸಂತೋಷ ಚಾಕಲಬ್ಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.












