ವೀರಭದ್ರೇಶ್ವರ ಜಯಂತೋತ್ಸವಕ್ಕೆ ರೇವಣಸಿದ್ದೇಶ್ವರ ಸ್ವಾಮಿಜಿಯಿಂದ ಚಾಲನೆ
- 15 Jan 2024 , 2:32 AM
- Haveri
- 280
ಬಂಕಾಪುರ: ಶ್ರೀ ವೀರಭದ್ರೇಶ್ವರ ಜಯಂತೋತ್ಸವಕ್ಕೆ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪರಶಿವನ ಮಾನಸ ಪುತ್ರನೆಂದೇ ಕರೆಯಲ್ಪಡುವ ಶ್ರೀ ವೀರಭದ್ರಸ್ವಾಮಿ ಭಾದ್ರಪದ ಮಾಸ ಮೊದಲ ಮಂಗಳವಾರ ಜನಸಿರುವುದರಿಂದ ಆತನು ಶಿಷ್ಟರ ರಕ್ಷಕ, ದುಷ್ಟರ ಸಂಹಾರಕನಾಗಿರುವನು. ಶ್ರೀ ವೀರಭದ್ರಸ್ವಾಮಿಯ ಜಯಂತೋತ್ಸವವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರತಿವರ್ಷ ದೇಶಾದ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ಹೇಳಿದರು. ಕೊರೊನಾ ಹಾವಳಿ ಇರುವುದರಿಂದ ಈ ಬಾರಿ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಅತಿ ಸರಳವಾಗಿ ಕೆಲವೇ ಭಕ್ತರೊಂದಿಗೆ ಕೂಡಿಕೊಂಡು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗಿದೆ. ಶ್ರೀ ವೀರಭದ್ರಸ್ವಾಮಿ ದುಷ್ಠರ ಸಂಹಾರ ಮಾಡಿದಂತೆ ಈ ಕೊರೊನಾ ಮಹಾಮಾರಿಯನ್ನು ಸಂಹರಿಸಲಿ ಎಂದು ಹೇಳುವುದರ ಜೊತೆಗೆ ಬರುವ ವರ್ಷದಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವವನ್ನು ವೀರಶೈವ, ಲಿಂಗಾಯತ ಸಮಾಜದವರೆಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸೋಣ ಎಂದು ಹೇಳಿದರು. ಯುವ ಮುಖಂಡ ಮಂಜುನಾಥ ಕೂಲಿ ಮಾತನಾಡಿ, ಈ ಬಾರಿ ಕೋವಿಡ್-19 ಇರುವುದರಿಂದ ಸಮಾಜ ಬಾಂದವರು ಶ್ರೀ ವೀರಭದ್ರೇಶ್ವರ ಜಯಂತಿಯನ್ನು ತಮ್ಮತಮ್ಮ ಮನೆಗಳಲ್ಲಿ ಭಕ್ತಿ,ಭಾವಗಳಿಂದ ಆಚರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ ಗೌರಿಮಠ, ಹೊನ್ನಪ್ಪ ಹೂಗಾರ, ಬಸವರಾಜ ನಾರಾಯಣಪುರ, ಅಶೋಕ ಶೆಟ್ಟರ, ರವಿ ಕುರಗೋಡಿ, ಗುರಲಿಂಗಪ್ಪ ಸವಣೂರ, ಸುರೇಶ ಕುರಗೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.












