ಕಾರ್ಮಿಕರಿಗೆ ಕೂಲಿ ಹಣ ನೀಡಲು ವಿಳಂಭ ಅಧಿಕಾರಿಗಳಿಂದ ಪರಿಹಾರ ಕೊಡಿಸುವಂತೆ ಆಗ್ರಹ
- 15 Jan 2024 , 4:46 AM
- Haveri
- 111
ಬ್ಯಾಡಗಿ: ಗ್ರಾಮ ಪಂಚಾಯತಿಗಳಲ್ಲಿ ಕೂಲಿಕಾರ್ಮಿಕರಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಆಗುತ್ತಲಿದೆ. ಇಂಜಿನೀಯರ್, ಪಿಡಿಓ ಅವರ ಸಮಸ್ಯೆಗಳಿಂದ ಕೂಲಿಕಾರರು ತೀವ್ರ ತೊಂದರೆ ಅನುಭವಿಸಬೇಕಿದೆ ಎಂದು ಕೂಲಿಕಾರರ ಸಂಘಟನೆ ತಾಲೂಕಾಧ್ಯಕ್ಷ ರಾಜು ಆಲದಹಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಅಂಗರಗಟ್ಟಿ ಗ್ರಾಮ ಸೇರಿದಂತೆ ಬಹುತೇಕ ಗ್ರಾಮಗಳ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಗುರುವಾರ ತಾ.ಪಂ.ವ್ಯವಸ್ಥಾಪಕ ಪ್ರಕಾಶ ಹಿರೇಮಠರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಕೂಲಿಹಣ ಜಮೆಯಾಗದೆ ಕೂಲಿಕಾರರು ಪರದಾಡುತ್ತಿದ್ದು, ವಿಳಂಭಕ್ಕೆ ಕಾರಣವಾಗಿರುವ ಅಧಿಕಾರಿಗಳಿಂದ ಪರಿಹಾರ ಹಣ ಕೊಡಿಸುವಂತೆ ಆಗ್ರಹಿಸಿದರಲ್ಲದೆ, 100 ರಿಂದ 150 ದಿನ ಕೂಲಿ ನೀಡುವ ಆದೇಶ ಜಾರಿಗೊಂಡಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿಗೆ ಕೂಲಿಕಾರರು ಕಚೇರಿಗಳಿಗೆ ಅಲೆದಾಡುವ ದುಸ್ಥಿತಿ ಬಂದಿದೆ.

ತಾಲೂಕಿನ ಅಂಗರಗಟ್ಟಿ ಗ್ರಾಮದ ಹಳ್ಳದ ಕಾಲುವೆ ಕಾಮಗಾರಿಯನ್ನು ಜೂನ ತಿಂಗಳಲ್ಲಿ ಕೈಗೊಂಡಿರುವ ಕೂಲಿ ಕಾರ್ಮಿಕರಿಗೆ ಈವರೆಗೂ ಹಣ ಜಮೆಯಾಗಿಲ್ಲ. ಈ ಕುರಿತು ಸಿಇಓ ರಿಂದ ಹಿಡಿದು ಎಲ್ಲರಿಗೂ ಮನವಿ ಪತ್ರ ಕೊಡಲಾಗಿದೆ. 3 ತಿಂಗಳ ವಿಳಂಭಕ್ಕೆ ಕಾರಣವಾಗಿರುವ ಅಧಿಕಾರಿಗಳಿಂದ ನಮಗೆ ಕೂಲಿಹಣ ಹಾಗೂ ಪರಿಹಾರ ಹಣ ಕೊಡಿಸಿ, ಇಲ್ಲವಾದ್ರೆ ಪಂಚಾಯತಿ ಎದುರು ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. 100 ದಿನ ಕೂಲಿ ದಿನಗಳನ್ನು ಪೂರೈಸಿದ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಕಾರ್ಮಿಕ ಇಲಾಖೆ ನೀಡುವ ಗುರ್ತಿನ ಚೀಟಿಯನ್ನು ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ನೂರಾರು ಜನ ಕಾರ್ಡಗೆ ಅರ್ಜಿ ಸಲ್ಲಿಸಿದರೂ, ಬೇರೆ ಬೇರೆ ಕಾರಣ ಹೇಳುವ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಬೆರಳಣಿಕೆಯಷ್ಟು ಕಾರ್ಮಿಕರಿಗೆ ಮಾತ್ರ ವಿತರಿಸಿದ್ದು, ಉಳಿದವರಿಗೆ ಕಚೇರಿಗೆ ಪದೆ ಪದೆ ಅಲೆದಾಡಿಸುತ್ತಿದ್ದಾರೆ. ಕಾರ್ಮಿಕ ಇಲಾಖೆ ನಿರೀಕ್ಷರು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಕೂಡಲೇ ತಾಲೂಕಿಗೊಬ್ಬ ಕಾರ್ಮಿಕ ನಿರೀಕ್ಷಕರನ್ನು ನೇಮಿಸುವಂತೆ ಇದೇ ವೇಳೆ ಒತ್ತಾಯಿಸಿದರು. ಈ ವೇಳೆ ಸುರೇಶ ತಿಮ್ಮಜ್ಜಿ, ರಾಜು ಅಂಬ್ಲೇಪ್ಪನವರ, ಮಂಜಪ್ಪ ಕರಿಯಣ್ಣನವರ, ಈರಪ್ಪ ಮಾಳಗಿ, ಗದಿಗೆಪ್ಪ ಹುಣಸಿಕಟ್ಟಿ, ದಾದಾಪೀರ ತಿಳವಳ್ಳಿ ಇತರರಿದ್ದರು.











