ಎಪಿಎಂಸಿ ಉಪಮಾರುಕಟ್ಟೆಗೆ ಶೀಘ್ರ ವ್ಯವಸ್ಥೆ ಕಲ್ಪಿಸಿ; ರೈತ ಸಂಘದಿಂದ ಮನವಿ

  • 15 Jan 2024 , 2:34 AM
  • Haveri
  • 116

ರಾಣೇಬೆನ್ನೂರು : ನಗರದಲ್ಲಿರುವ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ವಿಳೆದೆಲೆ, ಈರುಳ್ಳಿ, ಹಾಗೂ ಬೆಳ್ಳುಳ್ಳಿ ವ್ಯಾಪಾರಸ್ಥರು ಪಾರದರ್ಶಕವಾಗಿ ವ್ಯಾಪಾರ ವಹಿವಾಟು ಮಾಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿನ ರೈತರು ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಸಮಯದಲ್ಲಿಯೂ ರೈತರ ಬೆಳೆದ ಮಾಲುಗಳನ್ನು ಖುಲ್ಲಾ ಜಾಗೆಯಲ್ಲಿ ಸಾಮೂಹಿಕವಾಗಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಾ ಬಂದಿರುತ್ತಾರೆ. ತಾಲೂಕಿನ ಹಲಗೇರಿ ಗ್ರಾಮದಲ್ಲಿರುವ ಉಪಮಾರುಕಟ್ಟೆಯಲ್ಲಿ ಕಲ್ಪಿಸಿರುವ ವ್ಯವಸ್ಥೆಯನ್ನು ಇಲ್ಲಿನ ಮಾರುಕಟ್ಟೆಯಲ್ಲಿ ಕಲ್ಪಿಸಬೇಕು.

promotions

ಒಂದು ತಿಂಗಳ ಒಳಗಾಗಿ ಇದನ್ನು ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ರೈತ ಮುಖಂಡ ಬಿ.ಕೆ. ರಾಜನಹಳ್ಳಿ ಮಾತನಾಡಿ, ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ದಿನವೂ ವಿಳೆದೆಲೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ವ್ಯಾಪಾರ ನಡೆಯುತ್ತದೆ. ವ್ಯಾಪಾರಸ್ಥರು ತಮ್ಮ ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ವಹಿವಾಟು ನಡೆಸುತ್ತಾರೆ. ಇದರಿಂದ ಮಾರುಕಟ್ಟೆಗೆ ಬರುವ ರೈತರಿಗೆ ತೊಂದರೆಯಾಗುತ್ತಿದೆ. ರೈತರ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ನಿರ್ಮಾಣವಾಗಿರುವ ಮಾರುಕಟ್ಟೆಯಲ್ಲಿ ಪಾರದರ್ಶಕವಾದ ವ್ಯವಹಾರ ವಹಿವಾಟು ಮಾಡಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ರೈತ ಸಂಘದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಮನವಿ ಸ್ವೀಕರಿಸಿದ ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಶೀಘ್ರದಲ್ಲಿ ಅನುಕೂಲ ಕಲ್ಪಿಸಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

promotions

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಾನಂದ ಹೊಸಮನಿ, ಮಂಜುನಾಥ ಮನಿಮಠ, ಹೂವಪ್ಪ ಬೂದಿಹಾಳ, ಬೀರಪ್ಪ ಬೀರಜ್ಜನವರ, ಷಣ್ಮುಖಪ್ಪ ಹಿತ್ತಲಮನಿ, ಉಮೇಶಣ್ಣ ತೋಟಪ್ಪನವರ, ಬಸವರಾಜ ಬಣಕಾರ, ಗಣೇಶ ಶಿಡೇನೂರ, ರಾಜಪ್ಪ ಕಿಚಡಿ, ರಾಜು ಮಲ್ಲಾಡದ, ಉದಯ ಕುಂದಾಪುರ, ರಾಜು ಮೈದೂರ, ಗದಿಗೆಪ್ಪ ಬಣಕಾರ, ನವೀನಕುಮಾರ ಹುಗ್ಗಿ, ದೀಪಕ ಕಲಾಲ, ಎಸ್.ಕೆ.ನೆಗಳೂರ, ಹನುಮಂತಪ್ಪ ಹುಲ್ಲಿನಮನಿ, ನಾಗರಾಜ ಚೌಡಪ್ಪಳವರ, ಮುಕ್ಕಪ್ಪ ಬಣಕಾರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Read More Articles