ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ
- 15 Jan 2024 , 1:24 AM
- Haveri
- 131
ರಾಣೇಬೆನ್ನೂರ : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮತ್ತು ಆದಿಜಾಂಭವ (ಮಾದಿಗ) ಸಂಘದ ಕಾರ್ಯಕರ್ತರು ಸೋಮವಾರ ಉಪತಹಸೀಲ್ದಾರ ಎಂ.ಎನ್.ಹಾದಿಮನಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ನೀಲಕಂಠಪ್ಪ ಕುಸಗೂರ ಮಾತನಾಡಿ, ಇತ್ತೀಚಿಗೆ ಸುಪ್ರೀಂಕೋರ್ಟ್ ಒಳ ಮೀಸಲಾತಿ ಅಗತ್ಯವಿದೆ ಎಂಬ ತೀರ್ಪು ನೀಡಿದೆ. ಪರಿಶಿಷ್ಟ ಜನಾಂಗದಲ್ಲಿ ಕೆಲವು ಅಸ್ಪೃಶ್ಯ ಜನಾಂಗಳು ಸೇರಿಕೊಂಡಿರುವುದರಿಂದ ಸರಕಾರದ ಸೌಲಭ್ಯಗಳು ಅಸ್ಪೃಶ್ಯರಿಗೆ ಸರಿಯಾದ ಪ್ರಮಾಣದಲ್ಲಿ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಕೂಡಲೇ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅದನ್ನು ಜಾರಿಗೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.

ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಚಲೋ ಚಳುವಳಿ ಹಮ್ಮಿಕೊಂಡು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮನವರ, ಎಚ್.ಡಿ.ಹೊನ್ನಕ್ಕಳವರ, ರವಿ ಹುಚ್ಚಪ್ಪಳವರ, ಧರ್ಮಪ್ಪ ಅಂತರವಳ್ಳಿ, ಬಸವಂತಪ್ಪ ಮಾದರ, ನಾಗರಾಜ ಸಿದ್ದಪ್ಪನವರ, ಶ್ರೀಕಾಂತ ಸಣ್ಮನಿ, ಹನುಮಂತಪ್ಪ ಕಬ್ಬಾರ, ಮಂಜಪ್ಪ ಗಂಗಾಪುರ, ರಘು ಆಡೂರ, ಮಾಲತೇಶ ಬ್ಯಾಡಗಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.











