ದಯಾಮರಣ ಕೋರಿ ನಿವೃತ್ತ ಶಿಕ್ಷಕಿ ಸುಮಂಗಲಾ ಪಾಟೀಲ ಮನವಿ
- 15 Jan 2024 , 2:11 AM
- Haveri
- 146
ಬಂಕಾಪುರ: ಸರ್ಕಾರ ನಿವೃತ್ತಿ ಮಾಡಿ ಕನಿಷ್ಠ ಸೌಲಭ್ಯ ನೀಡದೇ ಬರಿಗೈಯಿಂದ ಕಳುಹಿಸುವ ಮೂಲಕ ಇಳಿವಯಸ್ಸಿನಲ್ಲಿ ಪಿಂಚಣಿ ಇಲ್ಲದೇ ಬದುಕು ಸಾಗಿಸುವುದು ಬಲು ಕಷ್ಟಕರವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಪಟ್ಟಣದ ಕೀರ್ತಿ ಪ್ರೌಢ ಶಾಲೆ ನಿವೃತ್ತ ಶಿಕ್ಷಕಿ ಸುಮಂಗಲಾ ಪರ್ವತಗೌಡ ಪಾಟೀಲ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ 1989 ರಲ್ಲಿ ಅನುದಾನ ರಹಿತ ಬಂಕಾಪುರ ಕೀರ್ತಿ ಪ್ರೌಢ ಶಾಲಾಯಲ್ಲಿ ಕನ್ನಡ ವಿಷಯ ಬೋಧನೆ ಶಿಕ್ಷಕಿಯಾಗಿ ನೇಮಕಾತಿ ಹೊಂದಿದ್ದು, ಸತತ 17 ವರ್ಷ ಅಂದರೆ 2006 ವರೆಗೆ ಉಚಿತ ಸೇವೆ ಸಲ್ಲಿಸಿದ್ದೇನೆ. ನಂತರ 12 ವರ್ಷ 7 ತಿಂಗಳು ಸರ್ಕಾರದ ವೇತನ ಪಡೆದು ಸೇವೆ ಸಲ್ಲಿಸಿದ್ದೇನೆ. 2018 ರಲ್ಲಿ ಸೇವೆಯಿಂದ ವಯೊನಿವೃತ್ತಿ ಹೊಂದಿದ್ದೇನೆ. ಸರ್ಕಾರ ನಿವೃತ್ತಿ ನಂತರ ಯಾವುದೇ ಸೌಲಭ್ಯ ನೀಡಿರುವುದಿಲ್ಲ. ಕುಟುಂಬದಲ್ಲಿ ನನಗೆ ಪತಿ ಬಿಟ್ಟು ಬೇರೆ ಯಾರು ಇರುವುದಿಲ್ಲ. ಕೂಲಿನಾಲಿ ಮಾಡಿ ಬದುಕಬೇಕೇಂದರೆ ಶಕ್ತಿ ಇಲ್ಲದಂತಾಗಿದೆ. ಆರ್ಥಿಕವಾಗಿ ತೀರಾ ಕುಗ್ಗಿ ಹೋಗಿದ್ದು, ಸರಿಯಾಗಿ ವಾಸ ಮಾಡಲೂ ಕೂಡಾ ಮನೆಯಿಲ್ಲದಂತಾಗಿದೆ.

ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ತೃಪ್ತಿ ಒಂದನ್ನು ಬಿಟ್ಟರೆ ಬೇರಾವುದೇ ಸೌಕರ್ಯಗಳು ನನಗೆ ಸಿಕ್ಕಿರುವುದಿಲ್ಲ. ಆದರೆ ಈ ಸಂದ್ಯಾ ವಯಸ್ಸಿನಲ್ಲಿ ಪಿಂಚಣಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಬದುಕು ಬೀದಿಪಾಲಾಗುವ ಮುನ್ನ ಸರ್ಕಾರ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ವಯೂಮೊವೃತ್ತಿ ನಂತರ ಪಿಂಚಣಿ ಸೌಲಭ್ಯಗಳನ್ನು ಆಯಾ ಸರ್ಕಾರ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ಮಾತ್ರ ಪಿಂಚಣಿ ಯೋಜನೆ ಜಾರಿಯಾಗಿಲ್ಲ. ತಕ್ಷಣ ಸರ್ಕಾರ ಈ ಕಡೆ ಗಮನ ಹರಿಸಿ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತರಿಗೆ ಪಿಂಚಣಿ ಪೂರೈಸಬೇಕು ಇಲ್ಲವಾದಲ್ಲಿ ನನ್ನ ಕುಟುಂಬ ಪರಿವಾರಕ್ಕೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದೆನೆ ಎಂದು ಹೇಳುತ್ತಾರೆ ನಿವೃತ್ತ ಶಿಕ್ಷಕಿ ಸುಮಂಗಲಾ ಪಾಟೀಲ.











