ಆರು ತಿಂಗಳ ನಂತರ ಬೆಳಗಾವಿ-ಮಹಾರಾಷ್ಟ್ರ ಬಸ್ ಸಂಚಾರ ಪುನರಾರಂಭ

ಬೆಳಗಾವಿ : ಕೋವಿಡ್ 19 ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಅದರಂತೆ ಕರ್ನಾಟಕ - ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕಳೆದ ಆರು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಬೆಳಗಾವಿ - ಮಹಾರಾಷ್ಟ್ರ ಬಸ್ ಸಂಚಾರ ಇಂದು ಮತ್ತೆ ಪುನರಾರಂಭವಾಗಿದೆ.

promotions

ಇಂದು ಮೊದಲ ದಿನ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು , ಆದರೆ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಸಹ ಇದೆ. ಗಡಿ ಜಿಲ್ಲೆ ಬೆಳಗಾವಿಯಿಂದ ಪ್ರತಿನಿತ್ಯ ಗೋವಾ, ಮಹಾರಾಷ್ಟ್ರಕ್ಕೆ ಸಾವಿರಾರು ಜನ ಸಂಚಾರ ಮಾಡುತ್ತಿದ್ದರು ಆದರೆ, ಕಳೆದ ಆರು ತಿಂಗಳುಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಸಾರಿಗೆ ಇಲಾಖೆಗೆ ಬಾರಿ ಪ್ರಮಾಣದಲ್ಲಿ ಆರ್ಥಿಕ ಹೊಡೆತ ಬಿದ್ದಿದೆ.

promotions

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದುದರಿಂದ ಬಸ್ ಸಂಚಾರವನ್ನು ಇದುವರೆಗೂ ಪ್ರಾರಂಭಿಸಿರಲಿಲ್ಲ .ಇದೀಗ ಮತ್ತೆ ಬಸ್ ಸಂಚಾರ ಆರಂಭಗೊಂಡಿದ್ದು, ಇಂದು ಬೆಳಗಾವಿ- ಕೊಲ್ಲಾಪುರ , ಬೆಳಗಾವಿ - ಪುಣೆ , ಬೆಳಗಾವಿ ಮುಂಬೈ , ಬೆಳಗಾವಿ- ಸಾವಂತವಾಡಿ ಸೇರಿ ಅನೇಕ ಬಸ್ ಗಳ ಸಂಚಾರಕ್ಕೆ ವಾಯುವ್ಯ ಸಾರಿಗೆ ಇಲಾಖೆ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಪ್ರಯಾಣಿಕರ ಸುರಕ್ಷತೆಗೆ ಇಲಾಖೆಯಿಂದ ಅನೇಕ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಬಸ್ ಗಳನ್ನು ಆರಂಭಿಸಿದ್ದಾರೆ.

ದಿನದಿಂದ ದಿನಕ್ಕೆ ಪ್ರಯಾಣಿಕರು ಸಾರಿಗೆ ಬಸ್ ಗಳತ್ತ ಮುಖ ಮಾಡುತ್ತಿರುವುದರಿಂದ ಸಾರಿಗೆ ಇಲಾಖೆಯ ನಷ್ಟದ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದ್ದು. ಮುಂದಿನ ದಿನಗಳಲ್ಲಿ ಇಲಾಖೆ ಚೇತರಿಕೆ ಆಗುವ ನಿರೀಕ್ಷೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿದ್ದಾರೆ.

Read More Articles