ಬೆಳಗಾವಿ: ಕೆಆರ್‌ಐಡಿಎಲ್ ಕಚೇರಿ ವತಿಯಿಂದ ಕಾಮಗಾರಿ ಮಾಡದೇ ಹಣ ಪಾವತಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಣವನ್ನು ಮರಳಿ ಸರಕಾರಕ್ಕೆ ಪಡೆಯಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸಗೌಡ ಪಾಟೀಲ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದಲ್ಲಿ ಸವದತ್ತಿ ಮತ್ತು ಬೆಳಗಾವಿ ಕೆಆರ್‌ಐಡಿಎಲ್ ಕಚೇರಿ ವತಿಯಿಂದ ಅಂಗನವಾಡಿ ಕಟ್ಟಡ ಹೆಸರಿನಲ್ಲಿ 9 ಲಕ್ಷ 1700 ರೂ ಪಾವತಿ ಮಾಡಲಾಗಿದೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ, ಗಾಂಧಿ ಸಾಕ್ಷಿ ತಂತ್ರಾಂಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಭಾವಚಿತ್ರ ತೋರಿಸಲಾಗಿದೆ, ಈ ಅವಾಂತರ ನೋಡಿದರೇ, ಇಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆಯಲಾದ ಮಾಹಿತಿಯಲ್ಲಿ 2016-17 ರಿಂದ 2019-20 ರ ಅವಧಿಯಲ್ಲಿ ಓಬಳಾಪೂರ ಗ್ರಾಮದಲ್ಲಿ ಆರ್‌ಐಡಿಎಫ್ ಯೋಜನೆಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಕೆಆರ್‌ಐಡಿಎಲ್ ಸಂಸ್ಥೆಯಿಂದ ಮಾಡಲಾಗಿಲ್ಲ. 2016 ನೇ ಸಾಲಿನಲ್ಲಿ ಸವದತ್ತಿ ಕೆಆರ್‌ಐಡಿಎಲ್ ಕಚೇರಿಯಿಂದ ಆರ್‌ಐಡಿಎಫ್ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕಟ್ಟಡ ಹಸ್ತಾಂತರಿಸಲಾಗಿದೆ ಎಂದು ಕೆಆರ್‌ಐಡಿಎಲ್ ವತಿಯಿಂದ ದಿಕ್ಕು ತಪ್ಪಿಸುವ ಮಾಹಿತಿ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಓಬಳಾಪೂರ ಗ್ರಾಮದಲ್ಲಿ 2015-16 ರಿಂದ 2020 ರವರೆಗೆ ಅಂಗನವಾಡಿ ಕಟ್ಟಡ ನಿರ್ಮಿಸಿಲ್ಲ . 15 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಎರಡು ಅಂಗನವಾಡಿ ಕಟ್ಟಡಗಳು ಮಾತ್ರ ಇವೆ , ಈಗ ನಕಲಿ ದಾಖಲೆ ಸೃಷ್ಟಿಸಿ , ಅನುದಾನದ ದುರ್ಬಳಕೆ ಮಾಡಿಕೊಳ್ಳಲಾಗಿದೆ . ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ದುರ್ಬಳಕೆಯಾಗಿರುವ ಹಣವನ್ನು ಮರಳಿ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.