ರಸ್ತೆ ಕಾಮಗಾರಿಯನ್ನು ಬೇಗನೆ ಆರಂಭಿಸುವಂತೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕರವೇ
- 17 Dec 2023 , 11:06 PM
- Haveri
- 264
ಬ್ಯಾಡಗಿ: ಗಜೇಂದ್ರಗಡ-ಸೊರಬ ಹೆದ್ದಾರಿಯ ಮುಖ್ಯರಸ್ತೆ ವಿಸ್ತರಣೆ ಕಾರ್ಯ ವಿಳಂಬವಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಭೋವಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ ರವಿ ಕೊರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಯ ಖ್ಯಾತಿ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೆ ನಿತ್ಯವೂ ನೂರಾರು ಬೃಹತ್ ಲಾರಿಗಳು ಹಾಗೂ ಇತರೆ ವಾಹನಗಳು ಸಂಚರಿಸುತ್ತವೆ. ಆದರೆ ಕಿರಿದಾದ ರಸ್ತೆಯಲ್ಲಿ ಏಕಮುಖವಾಗಿ ವಾಹನ ಸಂಚರಿಸುವುದರಿಂದ ತುಂಬಾ ತೊಂದರೆಯುಂಟಾಗುತ್ತಿದೆ. ಆದ್ದರಿಂದ ಮುಖ್ಯರಸ್ತೆ ವಿಸ್ತರಿಸುವಂತೆ ವಿವಿಧ ಸಂಘ, ಸಂಸ್ಥೆಗಳು ಸಾಕಷ್ಟು ಹೋರಾಟ ನಡೆಸಿದ್ದರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಆರಂಭವಾಗುತ್ತಿಲ್ಲ. ಮಳೆಗಾಲ ಬಂದ್ರೆ ರಸ್ತೆಯಲ್ಲಿ ಕಾಲಿಡಲಾಗದಂತ ದುಸ್ಥಿತಿ ಉಂಟಾಗಿದೆ. ಪ್ರತಿನಿತ್ಯ ಸಾರ್ವಜನಿಕರು ಹಾಗೂ ವಾಹನ ಚಾಲಕರ ಗೋಳಾಟ ತಪ್ಪಿಲ್ಲ. ಸರ್ಕಾರ ವಿವಿಧ ಯೋಜನೆಗಳಿಗೆ ನೂರಾರು ಕೋ.ರೂ.ಮಂಜೂರು ಮಾಡುತ್ತಿದ್ದು, 25 ರಿಂದ 30 ಕೋ.ರೂ.ಕಾಮಗಾರಿಗೆ 10 ವರ್ಷಗಳ ಕಾಲ ಭರವಸೆ ನೀಡುತ್ತಾ ಬಂದಿದೆ. ಸ್ಥಳೀಯ ಶಾಸಕರು ಹಣ ಬಿಡುಗಡೆಯಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಣ ಮಂಜೂರಾದ್ರೆ ಕಾಮಗಾರಿ ವಿಳಂಭ ಏಕೆ..? ಎಂದು ಅವರೇ ಉತ್ತರಿಸಲಿ ಎಂದರು. ರಸ್ತೆ ವಿಸ್ತರಣೆ ವಿಳಂಭಕ್ಕೆ ಸರ್ಕಾರವೇ ನೇರ ನೇರಹೊಣೆಯಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಹೋರಾಟ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಮಹಾದೇವಪ್ಪ ಹೆಡಿಗೊಂಡ, ಅನೂಸುಯಾ ಸಿದ್ದಪ್ಪಳವರ, ಮೌಲಾಸಾಬ ನದಾಪ, ಸಚ್ಚಿನ ಡೊಳ್ಳಿನ, ವಿಶ್ವನಾಥ ದ್ವೀಪದ, ಫಕ್ಕೀರಪ್ಪ ಹಿರೇಮಠ, ಸುನಿಲ ಪೂಜಾರ, ಚೇತನ ಮಣ್ಣಬಸಣ್ಣನವರ ಇತರರು ಉಪಸ್ಥಿತರಿದ್ದರು.










