ಸೂರ್ಯಕಾಂತಿ ಬೆಳೆಯಲ್ಲಿ ಬೀಜೋಪಚಾರದ ಮಹತ್ವ
- 14 Jan 2024 , 10:46 PM
- Haveri
- 121
ರಾಣೇಬೆನ್ನೂರ : ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೂರ್ಯಕಾಂತಿ ಬೆಳೆಯಲ್ಲಿ ಹೊಸ ತಳಿ ಕೆ.ಬಿ.ಎಸ್.ಹೆಚ್-53 ಹಾಗೂ ಪೋಷಕಾಂಶಗಳ ನಿರ್ವಹಣೆ ಗುಚ್ಛ ಕ್ಷೇತ್ರ ಪ್ರಾತ್ಯಕ್ಷಿಕೆಯ ತರಬೇತಿ ಕಾಯಕ್ರಮ ನಡೆಯಿತು. ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಅಶೋಕ.ಪಿ. ಅದುಕ್ಷತೆ ವಹಿಸಿ ಮಾತನಾಡಿದ ಅವರು, ಸೂರ್ಯಕಾಂತಿ ಬೀಜದ ಮೇಲೆ ಬೆಲ್ಲದ ತಿಳಿ ಅಂಟಿನ ದ್ರಾವಣವನ್ನು ಚಿಮುಕಿಸಿ ಜೈವಿಕ ಗೊಬ್ಬರ ಅಥವಾ ಪೀಡೆನಾಶಕದಿಂದ ಬೀಜೋಪಚಾರ ಮಾಡಬೇಕು.

ಬೀಜೋಪಚಾರವನ್ನು ಮಾಡಿದ ನಂತರ ಬೀಜಗಳನ್ನು ಕೆಲ ಸಮಯದವರೆಗೆ ನೆರಳಿನಲ್ಲಿ ಒಣಗಿಸಿ ತದನಂತರ ಬಿತ್ತನೆಗೆ ಉಪಯೋಗಿಸಬೇಕು. ಈ ಬೀಜೋಪಚಾರಿಂದ ಬೆಳೆಯಿಂದ ಬೆಳೆಗೆ ಬೀಜದ ಮೂಲಕ ಹರಡುವ ರೋಗದಿಂದ ರಕ್ಷಿಸಬಹುದು, ಬೀಜ ಕೊಳೆಯವುದು ಹಾಗೂ ಸಸಿ ಒಣಗುವುದನ್ನು ನಿಯಂತ್ರಿಸಬಹುದು. ಇವುಗಳಲ್ಲದೆ ಬೀಜೋಪಚಾರದಿಂದ ಬೀಜದ ಮೊಳಕೆಯ ಪ್ರಮಾಣವನ್ನು ಹೆಚ್ಚಿಸಬಹುದು ಎಂದರು. ಕೀಟಶಾಸ್ತ್ರಜ್ಞ ಡಾ. ಕೆ.ಪಿ.ಗುಂಡಣ್ಣವರ ಮಾತನಾಡಿ, ಸೂರ್ಯಕಾಂತಿ ಬೆಳೆಯಲ್ಲಿ ಬರುವ ಪ್ರಮುಖ ಕೀಟ ಮತ್ತು ರೋಗಗಳ ಹಾಗೂ ಅವುಗಳ ಹತೋಟಿಯ ಬಗ್ಗೆ ಸವಿಸ್ತಾರವಾಗಿ ರೈತರಿಗೆ ತಿಳಿಸಿದರು. ಬೇಸಾಯ ತಜ್ಞ ಡಾ.ಶಿವಮೂರ್ತಿ.ಡಿ ಮಾತನಾಡಿ, ಸೂರ್ಯಕಾಂತಿಯ ಆಧುನಿಕ ಬೇಸಾಯ ಕ್ರಮಗಳ ಬಗ್ಗೆ ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಸೂರ್ಯಕಾಂತಿಯ ವಿವಿಧ ತಳಿಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ಹಂಚಿಕೊಂಡರು.

ಪಶು ವಿಜ್ಞಾನಿ ಡಾ.ಮಹೇಶ ಕಡಗಿ ಮಾತನಾಡಿ, ಪಶು ಪಾಲನೆ ಮತ್ತು ಮೇವು ಸಂಗ್ರಹಣೆ ಮತ್ತು ಪೌಷ್ಠಿಕರಣದ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರೈತರಿಗೆ ಸೂರ್ಯಕಾಂತಿ ಬೆಳೆಯ ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳಿಂದ ಬೀಜೋಪಚಾರ ಕುರಿತು ಪದ್ಧತಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಯಡಗೋಡ ಗ್ರಾಮದ ರೈತರು ಭಾಗವಹಿಸಿದ್ದರು.










