ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಿರುವುದು ಏನು? ವಿಚಾರ ಸಂಕೀರ್ಣ ಕಾರ್ಯಕ್ರಮ
- 14 Jan 2024 , 11:51 PM
- Belagavi
- 154
"ಬಳಸಿದಷ್ಟುಬೆಳೆದೀತುಕನ್ನಡಭಾಷೆ" ಸಾಹಿತಿಗಳ ಅಭಿಮತ

ಬೆಳಗಾವಿ: ೬೫ ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಇಂದು ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಿರುವುದು ಏನು? ಎಂಬ ವಿಷಯದ ಕುರಿತು ಇಂದು ಮುಂಜಾನೆ 10.30 ರಿಂದ 11.30 ವರೆಗೆ ಫೇಸ್ ಬುಕ್ ಲೈವ್ ಸಂವಾದ ಕಾರ್ಯಕ್ರಮ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ನೇರ ಪ್ರಸಾರಗೊಂಡಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಈ ಸಂವಾದದಲ್ಲಿ ಆಶಯ ನುಡಿಗಳನ್ನು ಪ್ರಸ್ತುತಪಡಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇದುವರೆಗೆ ಆಗಿದ್ದೇನು? ಎಂಬುದರ ಆತ್ಮಾವಲೋಕನ ಮಾಡಿಕೊಂಡು ಮುಂದೆ ಆಗಬೇಕಿರುವುದು ಏನು? ಎಂಬುದರ ಬೆಳಕು ಚೆಲ್ಲಲು ಈ ಸಂವಾದ ಸಹಕಾರಿಯಾಗಲಿದೆ ಎಂದರು.

ಕೊರೋನಾ ಮಹಾಮಾರಿ ಹಿನ್ನೆಲೆಯಿಂದ ಸಭೆ-ಸಮಾರಂಭಗಳಿಗೆ ಹೆಚ್ಚು ಜನರನ್ನು ಸೇರಿಸದೆ ಇರುವುದರಿಂದ ಸರಳ ರೀತಿಯಲ್ಲಿ ಫೇಸ್ ಬುಕ್ ಲೈವ್ ಮೂಲಕ ಜನರನ್ನು ತಲುಪುವ ಪ್ರಯತ್ನ ಇದಾಗಿದೆ. ಕನ್ನಡ ಅನುಷ್ಠಾನಕ್ಕೆ ಸರ್ಕಾರ ಹತ್ತು ಹಲವು ಕ್ರಮ ಕೈಗೊಂಡಿದೆ. ಕನ್ನಡದ ಸಮರ್ಪಕ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡ ಪರಿಣಾಮ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಗೆ ಬರುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.
ಸಂವಾದದಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಪ್ರೊ.ಬಸವರಾಜ ಜಗಜಂಪಿ ಅವರು, ಕನ್ನಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷಾಭಿಮಾನ ಇಲ್ಲದಿರುವುದರಿಂದ ಬೆಳವಣಿಗೆಗೆ ಕುತ್ತು ಬರುತ್ತಿದೆ ಯಾವುದೇ ಭಾಷೆ ಕಲಿತರೂ ಅನುಕೂಲ. ಆದರೆ ಮಾತೃಭಾಷೆಗೆ ಮೊದಲ ಆದ್ಯತೆ ನಮ್ಮದಾಗಬೇಕು.ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸಬೇಕು. ಇಂಗ್ಲಿಷ್ ಮೋಹದಲ್ಲಿ ಕನ್ನಡದ ಅಸ್ಮಿತೆ ಕಳೆದುಹೋಗದಂತೆ ನಾವು ಎಚ್ಚರಿಕೆ ವಹಿಸಬೇಕು. ಇಂಗ್ಲಿಷ್ ಭ್ರಮೆಯಿಂದ ನಾವು ಹೊರಬರಬೇಕಿದೆ. ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಮತ್ತು ಸಂಪೂರ್ಣ ತಿಳಿವಳಿಕೆ ಹೊoದಿರುವವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದಾಗ ಪ್ರಾಧಿಕಾರದಿಂದ ಉತ್ತಮ ಕೆಲಸ ಸಾಧ್ಯ ಎಂದು ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಸಾಹಿತಿ ಬಸವರಾಜ ಗವಿಮಠ ಅವರು, ಕೆಲವು ದಶಕಗಳ ಹಿಂದೆ ಕನ್ನಡ ಸ್ಥಿತಿ ಈಗಿನಂತೆ ಇರಲಿಲ್ಲ; ಆದರೆ ಈಗ ಬೆಳಗಾವಿಯಂತ ನಗರದಲ್ಲೂ ಕನ್ನಡದ ಕಂಪು ಹರಡಿದೆ ಎಂದು ವಿವರಿಸಿದರು. ಸರ್ಕಾರ ಹಲವು ಸುತ್ತೋಲೆಗಳನ್ನು ಹೊರಡಿಸಿದ್ದರೂ ಅಧಿಕಾರಿ ವರ್ಗದ ನಿರಾಸಕ್ತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಾಧ್ಯವಾಗಿರುವುದಿಲ್ಲ. ಶಿಕ್ಷಣ ಪೋಷಕರ ಹಕ್ಕಾಗಿರುವುದರಿಂದ ಕನ್ನಡ ಮಾಧ್ಯಮದ ಶಿಕ್ಷಣ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ-ಮಹಾರಾಷ್ಟ್ರ-ಆಂಧ್ರ ರಾಜ್ಯಗಳ ಜನರ ಭಾಷೆ-ಬದುಕಿನಲ್ಲಿ ಸಾಮ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಹಿರಿಯ ನಾಟಕಕಾರ, ವಿಮರ್ಶಕ ಮತ್ತು ಕಲಾವಿದ ಡಿ.ಎಸ್.ಚೌಗಲೆ ಅವರು, ಈ ಮೂರೂ ರಾಜ್ಯಗಳ ಸಂತರು, ದಾರ್ಶನಿಕರಿಗೆ ಉಭಯ ಭಾಷೆಗಳು ಗೊತ್ತಿದ್ದವು ಎಂದರು. ಈ ಭಾಷೆಗಳ ನಡುವಿನ ಅನನ್ಯತೆಯನ್ನು ಸೋದಾರಣವಾಗಿ ವಿವರಿಸಿದ ಅವರು, ಪರಸ್ಪರ ಸಾಮರಸ್ಯ ಇರುವುದನ್ನು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಸಾಹಿತಿ ನೀಲಗಂಗಾ ಚರಂತಿಮಠ ಅವರು, ಕನ್ನಡ ಬರೀ ಭಾಷೆಯಲ್ಲ; ಅದು ಬದುಕು. ಭಾಷೆ ಉಳಿದಾಗ ಮಾತ್ರ ಪ್ರದೇಶ ಉಳಿಯಲು ಸಾಧ್ಯ ಎಂದರು. ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮೂಲಕ ಭಾಷೆಯ ಬಳಕೆ ಮತ್ತು ಬೆಳವಣಿಗೆಗೆ ಸಹಕರಿಸಬೇಕು. ಆಂಗ್ಲ ಮಾಧ್ಯಮ ಶಾಲೆಗಳು ಗಲ್ಲಿಗೊಂದರಂತೆ ಬೆಳೆಯುತ್ತಿರುವುದರಿಂದ ಕನ್ನಡ ಶಾಲೆಗಳಿಗೆ ಕುತ್ತು ಬಂದಿದೆ. ಮಮ್ಮಿ ಸಂಸ್ಕೃತಿಯಿಂದ ಅವ್ವ ಕಣ್ಮರೆಯಾಗುತ್ತಿದ್ದಾಳೆ. ನಾಡಿನ ಭಾಷೆ, ಪರಂಪರೆ, ಸಂಸ್ಕೃತಿಯನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂಬ ಒತ್ತಾಸೆಯನ್ನು ವ್ಯಕ್ತಪಡಿಸಿದರು.
ಫೇಸ್ ಬುಕ್ ಲೈವ್ ಸಂವಾದವನ್ನು ನಿರ್ವಹಿಸಿದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆ ರಕ್ಷಿಸಬೇಕು ಎಂಬುದು ಕೂಡ ಕೇಂದ್ರ ಸರ್ಕಾರದ ಆಶಯವಾಗಿದೆ. ಇದಕ್ಕೆ ಶಾಸನಬದ್ದ ಅವಕಾಶ ಕಲ್ಪಿಸಬೇಕಿದೆ ಎಂದು ಪ್ರತಿಪಾದಿಸಿದರು.
ಕನ್ನಡಪರ ಹೋರಾಟ ಅಥವಾ ಅನುಷ್ಠಾನದ ಕುರಿತು ಕನ್ನಡ ಸಾಹಿತ್ಯ ಪರಿಷತ್ ನಿರೀಕ್ಷಿತಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ ಏಕೆ ? ಕನ್ನಡ ಅನ್ನದ ಭಾಷೆಯಾದರೆ ಮಾತ್ರ ಬೆಳೆಯುವುದು ಸಾಧ್ಯ ಎಂಬ ಕಲ್ಪನೆಯಿದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆದು ಕನ್ನಡ ಬೆಳವಣಿಗೆಗೆ ಒಂದು ರೂಪುರೇಷೆ ಹಾಕಿಕೊಳ್ಳುವ ಅಗತ್ಯವಿದೆ ಎಂದರು.
ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಿರುವುದು ಏನು?ಜಿಲ್ಲಾಡಳಿತ, ಬೆಳಗಾವಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ “ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಿರುವುದು ಏನು?”
Posted by DC Belagavi on Friday, October 30, 2020
ರಾಜ್ಯೋತ್ಸವ ಮುನ್ನಾ ದಿನ ವಿಚಾರಸಂಕಿರಣ ಆಯೋಜಿಸುವ ಮೂಲಕ ರಾಜ್ಯೋತ್ಸವ ಅರ್ಥಪೂರ್ಣಗೊಳಿಸಬೇಕು ಎಂದು ಮೆಹಬೂಬ್ ಮಕಾನದಾರ ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮತ್ತಿತರರು ಉಪಸ್ಥಿತರಿದ್ದರು.










