ಕಾರ್ಮಿಕ-ರೈತ ವಿರೋಧಿ ನೀತಿ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ, ರೈತ ನೀತಿ ವಿರೋಧಿಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ ಹಾಗೂ ಸೌಲಭ್ಯ ಒದಗಿಸುವಂತೆ ಇಂದು ಬೆಳಗಾವಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ ಮತ್ತು ಸೌಲಭ್ಯಗಳು ದೊರೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪಬ್ಲಿಕ್ ಶಾಲೆಗಳಿಗೆ ಜೋಡಿಸುವ ಪ್ರಯತ್ನ ನಡೆದಿದೆ ಎಂದು ಆಗ್ರಹಿಸಿದರು.

promotions

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಮದುರ್ಗ ತಾಲೂಕು ಅಧ್ಯಕ್ಷೆ ಸರಸ್ವತಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಂದ ಕೆಲಸ ಮಾಡಿಸಿಕೊಂಡು ಸೌಲಭ್ಯಗಳು ಮತ್ತು ಸೇವಾ ಭದ್ರತೆ ನೀಡುತ್ತಿಲ್ಲ. ಸರ್ಕಾರ ಕೆಲಸ ಮಾಡುವವರ ಪರ ಇಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಸಿಐಟಿಯು ನಾಯಕಿ ಸಂಧ್ಯಾ ಕುಲಕರ್ಣಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕೊರೋನಾ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಮರೆತು ಅವರನ್ನು ಅತಂತ್ರರನ್ನಾಗಿಸುವ ಪ್ರಯತ್ನ ನಡೆದಿದೆ. ಸರ್ಕಾರ ಕಾರ್ಮಿಕ ವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಿಐಟಿಯುನ ಖಜಾಂಚಿ ಜಿ.ವಿ.ಕುಲಕರ್ಣಿ, ಎಲ್.ಎಸ್.ನಾಯಕ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ದೊಡ್ಡವ್ವ ಪೂಜಾರ ಮಂದಾ ನೇವಗಿ, ಭಾರತಿ ಜೋಗನ್ನವರ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

promotions

Read More Articles