ಮಹಾರಾಷ್ಟ್ರ ಡಿಸಿಎಂ ಅಜಿತ ಪವಾರ್ ಹೇಳಿಕೆಗೆ ಸಚಿವ ಎಸ.ಟಿ.ಸೋಮಶೇಖರ್ ಖಡಕ್ ತಿರುಗೇಟು

ಬೆಳಗಾವಿ : ಮಹಾರಾಷ್ಟ್ರದವರ ಮಾತಿಗೆ ಕಿಮ್ಮತ ಕೊಡಬೇಕಾಗಿಲ್ಲ. ನಾಡು - ನುಡಿ - ಭಾಷೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಎಂದಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಗಡಿ ವಿಷಯದಲ್ಲಿ ಕಾಲುಕೆದರಿಕೊಂಡು ಬರುವ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದರು. ಬೆಳಗಾವಿ , ಕಾರವಾರ ಮತ್ತು ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್, ಮಹಾರಾಷ್ಟ್ರದಲ್ಲಿ ಈಗ ಯಾವುದೋ ಚುನಾವಣೆ ಬಂದಿರಬೇಕು. ಈ ಕಾರಣಕ್ಕೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕೆ ಇಲ್ಲ ಎಂದರು. ಇನ್ನು ಸಚಿವಸಂಪುಟ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ ಬೆಳೆಸಿದ ಬಗ್ಗೆ ವಿಚಾರಿಸಿದಾಗ, ಸಚಿವ ಸಂಪುಟ ವಿಸ್ತರಣೆ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಹೊರತು ಪಡಿಸಿ ಯಾರಿಗೂ ಮಾಹಿತಿ ಇರುವುದಿಲ್ಲ. ಈಗಾಗಲೇ ಸಿಎಂ ಹೈಕಮಾಂಡ ಬಳಿ ಹೋಗಿದ್ದಾರೆ ಅಲ್ಲಿ ಮಾತನಾಡಿ ಏನ ತೀರ್ಮಾನ ಮಾಡ್ತಾರೆ ಅದು ಸಿಎಂ ಗೆ ಬಿಟ್ಟ ವಿಷಯ ಅದರ ಬಗ್ಗೆ ಸಿಎಂ ಮರಳಿದ ಬಳಿಕ ಸ್ಪಷ್ಟವಾಗಲಿದೆ ಎಂದರು.

promotions

promotions

Read More Articles