ಬೆಳಗಾವಿ ಡಿಸಿಯವರಿಗೆ ರಾಜ್ಯಮಟ್ಟದ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ.
- By:localviewNews
- 24 Jan 23 12:48 pm


ಬೆಳಗಾವಿ: ಭಾರತ ಚುನಾವಣಾ ಆಯೋಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಕೊಡಮಾಡುವ ಅತ್ಯುತ್ತಮ "ಜಿಲ್ಲಾ ಚುನಾವಣಾಧಿಕಾರಿ" ಪ್ರಶಸ್ತಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭಾಜನರಾಗಿದ್ದಾರೆ.
ಭಾರತ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರ ಕಚೇರಿಯ ವತಿಯಿಂದ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ನಲ್ಲಿ ಬುಧವಾರ(ಜ.25) ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ "ರಾಷ್ಟ್ರೀಯ ಮತದಾರರ ದಿನಾಚರಣೆ" ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜಕುಮಾರ್ ಮೀನಾ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಉಪಸ್ಥಿತರಿರುವರು.
ಮತದಾರರ ನೋಂದಣಿ, ಪರಿಷ್ಕರಣೆ ಸೇರಿದಂತೆ ಒಟ್ಟಾರೆ ಚುನಾವಣಾ ಕಾರ್ಯವನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದೇ ರೀತಿ ತುಮಕೂರು, ಯಾದಗಿರಿ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಇದಲ್ಲದೇ ವಿವಿಧ ಜಿಲ್ಲೆಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ನೋಂದಣಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಚುನಾವಣಾ ಶಾಖೆಯ ತಾಂತ್ರಿಕ ಸಿಬ್ಬಂದಿಗೂ ಪ್ರತ್ಯೇಕ ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದೆ.