ಅಮ್ಮಾ ಅನ್ನೋ ಎರಡಕ್ಷರದಿ
- 15 Jan 2024 , 12:51 AM
- Belagavi
- 256
ಅಮ್ಮ ಯಾಕೋ ಇಂದು ನೆನಪಾಗಿ ಕಾಡಿದಾಗ.
ಅಮ್ಮ ಎನ್ನುವ ಎರಡಕ್ಷರದಿ.
ಮಾನವೀಯ ಸಂಭಂದಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ.
ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ.
ಅಕ್ಕ, ತಂಗಿ, ಪ್ರೇಯಸಿ, ಹೆಂಡತಿ,, ಅತ್ತಿಗೆ, ಮಗಳು ಇತ್ಯಾದಿ ಎಲ್ಲಕ್ಕಿಂತ, ಹೆಚ್ಚಾಗಿ ಗೌರವಿಸಲ್ಪಡುವವಳು ಅಮ್ಮಾ.
ಅಮ್ಮಾ ಎಂಬ ಸ್ಥಿತಿಯೇ ಹೆಣ್ಣಿಗೆ ಪವಿತ್ರ, ಪೂಜನೀಯ ಸ್ಥಾನ ಕಲ್ಪಿಸಿದೆ.
ತಾಯಿನಾಡು, ತಾಯಿನುಡಿ, ತಾಯಿಯೇ ಮೊದಲ ಗುರು, ತಾಯಿ ಹೃದಯ, ತಾಯಿ ಕರುಳು ಈ ಮಾತುಗಳೇ ಅಮ್ಮನನ್ನು ಆರಾಧನಾ ಭಾವದೊಂದಿಗೆ ದೈವತ್ವಕ್ಕೇರಿಸಿದೆ.
ಪತ್ರಿಕೆಗಳು, ಟಿವಿಗಳು, ಸಾಮಾಜಿಕ ಜಾಲತಾಣಗಳು, ಸಾಹಿತ್ಯ, ಸಿನಿಮಾ, ಮನರಂಜನೆ ಇತ್ಯಾದಿ ಮಾಧ್ಯಮಗಳಲ್ಲಿ, ಅಮ್ಮನ ಬಗೆಗಿನ ವಿವರಣೆಗಳಲ್ಲಿ, ಪಾತ್ರ ಪೋಷಣೆಯಲ್ಲಿ ಭಾವತೀವ್ರತೆ ಉಕ್ಕಿ ಹರಿಯುತ್ತದೆ.
ಅಮ್ಮ,.
ಜೀವಿಯ ಅಸ್ತಿತ್ವದ ಮೊದಲ ಎಳೆ ಪ್ರಾರಂಭವಾಗುವುದೇ ತಾಯಿ ಹೊಟ್ಟೆಯಲ್ಲಿ - ಗರ್ಭದಲ್ಲಿ. ಮನುಷ್ಯ ಜೀವಿಗಳಲ್ಲಿ ಸರಿಸುಮಾರು 9 ತಿಂಗಳು ಜೀವಕ್ಕೆ ಆಶ್ರಯ ನೀಡುವುದು ತಾಯ ಹೊಟ್ಟೆ. ತನ್ನ ಕರುಳ ಬಳ್ಳಿಯ ಮುಖಾಂತರವೇ ನಮ್ಮನ್ನು ಪೋಷಿಸುತ್ತಾಳೆ. ಇದೊಂದು ಪ್ರಕೃತಿಯ ಸಹಜ ಕ್ರಿಯೆ ಮತ್ತು ವಿಸ್ಮಯ.ಇದು ಅಮ್ಮನ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆ.
ನಂತರ ಕರುಳು ಬಳ್ಳಿಯ ಕತ್ತರಿಸುವಿಕೆಯಿಂದ ಹೊರಬರುವ ಮಗು ತಾಯಿಗೆ ತನ್ನದೇ ದೇಹದ ವಿಸೃತ ಅಂಗ ಮತ್ತು ತನ್ನ ದೀರ್ಘ ನೋವಿನ ಪ್ರತಿಫಲ ಎಂಬಂತೆ ಭಾಸವಾಗುತ್ತದೆ. ಇಲ್ಲಿಂದ ಮುಂದೆ ತಾಯಿ ಮಗುವಿನ ಸಂಬಂಧದ ತೀವ್ರತೆಯ ಪ್ರಕ್ರಿಯೆ ವಾಸ್ತವದ ರೂಪ ಪಡೆಯುತ್ತದೆ.
ಹುಟ್ಟಿನಿಂದ ಕೆಲವು ತಿಂಗಳುಗಳವರೆಗೂ ಮಗುವಿಗೆ ತಾಯಿಯಲ್ಲದೆ ಬೇರೆ ಸಂಬಂಧದ ಅರಿವೇ ಇರುವುದಿಲ್ಲ. ಎಲ್ಲಕ್ಕೂ ತಾಯಿಯನ್ನು ಅವಲಂಬಿಸಿ ಚಡಪಡಿಸುತ್ತದೆ. ಆ ಚಡಪಡಿಸುವಿಕೆಯ ಕ್ಷಣಗಳೇ ತಾಯಿಗೆ ಮಗುವಿನ ಮೇಲಿನ ಪ್ರೀತಿ ಆಳವಾಗುತ್ತಾ ಹೋಗುತ್ತದೆ. ತಾಯಿಗೂ ಮಗುವಿಗೆ ತನ್ನ ಅನಿವಾರ್ಯತೆ ಮತ್ತು ತನ್ನನ್ನು ಪ್ರಾಣದಷ್ಟೇ ಪ್ರೀತಿಸುವ ಪುಟ್ಟ ಹೃದಯ ಒಂದಿದೆ ಎಂಬ ಭಾವ ಅಂತರ್ಗತವಾಗುತ್ತದೆ. ಅಲ್ಲಿ ಮಗುವಿಗೂ ಅಮ್ಮ ಎಂಬ ಭಾವ ಚಿರಸ್ಥಾಯಿಯಾಗುತ್ತದೆ.
ತದನಂತರ ಅಪ್ಪ ಅಣ್ಣ ಅಕ್ಕ ಅಜ್ಜ ಅಜ್ಜಿ ಮುಂತಾದ ವ್ಯಕ್ತಿಗಳ ಪ್ರವೇಶವಾದರೂ ತನ್ನ ಬೇಕು ಬೇಡಗಳಿಗೆ ಸ್ಪಂದಿಸುವ - ತಾಯ ದೇಹದ ಅಪ್ಪುಗೆಯೊಂದಿಗೇ ಕಳೆಯುವ ಮಗುವಿಗೆ ತಾಯ ಮಹತ್ವ ಅರಿವಾಗುತ್ತದೆ.
ಪುಟ್ಟ ಕಂದನ ಸಹಜ ಬೆಳವಣಿಗೆ - ಮುಗ್ದ ಚಟುವಟಿಕೆಗಳು ತಾಯಿಯ ಪ್ರೀತಿ - ಹೃದಯದಿಂದ ಮೆದುಳನ್ನೂ ಆಕ್ರಮಿಸುತ್ತದೆ. ಹಾಗೆಯೇ ಮಗುವಿನ ರಕ್ತದ ಪ್ರತಿ ಕಣಕಣದಲ್ಲೂ ಪ್ರತಿ ಉಸಿರಿನಲ್ಲೂ ಅಮ್ಮ ಐಕ್ಯವಾಗುತ್ತಾಳೆ. ಪ್ರೀತಿಯ ಪರಾಕಾಷ್ಠೆ ಮುಟ್ಟುತ್ತದೆ.
ಮುಂದೆ..,
ಪ್ರೀತಿ ಎಂಬ ಭಾವದಲ್ಲಿ ಸ್ವಾರ್ಥ - ತ್ಯಾಗ - ಅಸೂಯೆ - ದ್ವೇಷ - ಕೋಪ - ಅಭದ್ರತೆ - ಅವಶ್ಯಕತೆ - ಅನಿವಾರ್ಯತೆ, ಅವಲಂಬನೆ ಇತ್ಯಾದಿ ಭಾವಗಳೂ ಪರೋಕ್ಷವಾಗಿ ಅಂತರ್ಗತವಾಗಿರುತ್ತವೆ. ತಾಯಿ ಪ್ರೀತಿ ಬಹುತೇಕ ಸಂದರ್ಭಗಳಲ್ಲಿ ಸ್ವಾರ್ಥವಾಗಿ ಪರಿವರ್ತನೆ ಹೊಂದುವುದನ್ನು ಗಮನಿಸಬಹುದು. ಮಗು ನನ್ನದು ನಾನೇ ಸೃಷ್ಟಿಸಿದ್ದು ಅದರ ಮೇಲೆ ನನ್ನದೇ ನಿಯಂತ್ರಣ ಎಂಬ ಸ್ವಾರ್ಥ ಭಾವ ಬಲವಾಗುತ್ತಾ ಹೋಗುತ್ತದೆ. ಅದಕ್ಕೆ ತಂದೆ ಎಂಬ ಸಂಬಂಧವೂ ಪೂರಕವಾಗಿರುತ್ತದೆ.
ಯೌವನಕ್ಕೆ ಕಾಲಿಡುವ ಮಗು ಸ್ವಾತಂತ್ರ್ಯವನ್ನು ಬಯಸಲು ಪ್ರಾರಂಭಿಸಿದರೆ ತಾಯಿ ತಂದೆ ಅದಕ್ಕೆ ವಿರುದ್ಧವಾಗಿ ನಿಯಂತ್ರಣ ಹೊಂದಲು ಬಯಸುತ್ತಾರೆ. ಈ ಘರ್ಷಣೆ ಹಳೆಯ ಕಾಲದ ಸರಳ ಸಮಾಜದಲ್ಲಿ ಹೆಚ್ಚಿನ ಸಂಘರ್ಷವಿಲ್ಲದೆ ಮುಗಿದು ಹೋಗುತ್ತಿತ್ತು. ಆದರೆ ಇಂದಿನ ಆಧುನಿಕ ಸಂಕೀರ್ಣ ವ್ಯವಸ್ಥೆಯಲ್ಲಿ ಇದು ವೈಯಕ್ತಿಕತೆಯನ್ನೂ ಮೀರಿ ಸಾಮಾಜಿಕ ಸಂಘರ್ಷವಾಗಿ ಪರಿವರ್ತನೆ ಹೊಂದಿದೆ.
ಮುಖ್ಯವಾಗಿ ಅತ್ತೆ ಸೊಸೆ ಎಂಬ ಕೌಟುಂಬಿಕ ವ್ಯವಸ್ಥೆ ತಾಯಿಯ ಈ ಸ್ವಾರ್ಥದ ಕಾರಣಕ್ಕಾಗಿಯೇ ಹೆಚ್ಚಾಗಿ ಶಿಥಿಲಗೊಳ್ಳುತ್ತಿದೆ. ಮಗು ನನ್ನಂತೆ ಸೃಷ್ಟಿಯ ಸಹಜ ಸ್ವತಂತ್ರ ಜೀವಿ. ಅದು ಬೆಳೆದ ಒಂದು ಹಂತದ ನಂತರ ತಾಯಿ ನಾನೇ ಆದರೂ ಅದಕ್ಕೂ ಒಂದು ಸ್ವತಂತ್ರ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಅಮ್ಮ ಭಾವಿಸುವುದು ಕಡಿಮೆಯಾಗುತ್ತಿದೆ.
ನಾವು ವಾಸಿಸುತ್ತಿರುವ ಈ ಸಮಾಜದ ಸುತ್ತಮುತ್ತಲಿನ ಪ್ರಪಂಚದ ದ್ಯೆನಂದಿನ ಚಟುವಟಿಕೆಗಳಲ್ಲಿ , ಸಂಬಂದಗಳಲ್ಲಿ ಈ ಭಾವ ತೀವ್ರತೆ ಆತ್ಮವಂಚನೆಯ ರೀತಿ ಕಾಣುತ್ತದೆ.
ವಾಸ್ತವದಲ್ಲಿ ನಮ್ಮ ಅತ್ಯಂತ ಜೀವನಾವಶ್ಯಕ ಪ್ರತಿನಿತ್ಯದ ಊಟ, ತಿಂಡಿ ಇತ್ಯಾದಿ ಬೇಡಿಕೆಗಳನ್ನು ಪೂರೈಸಲು ಅಮ್ಮ ಅನಿವಾರ್ಯ.
ನಮ್ಮ ಮನೆ ನೋಡಿಕೊಳ್ಳಲು, ಮಕ್ಕಳನ್ನು ಪೋಷಿಸಲು, ಪುರುಷ ಪ್ರಧಾನ ಕುಟುಂಬಗಳಲ್ಲಿ, ಅಮ್ಮ ಅತ್ಯವಶ್ಯಕ.
ಅಪ್ಪನ ಹೊರ ದುಡಿತ, ಬೇರೆಯವರ ನಿರ್ಲಕ್ಷ್ಯ, ಆಕೆಯ ಮೇಲಿನ ಅವಲಂಬನೆ, ಅಮ್ಮನ ಅತಿ ಪ್ರೀತಿ, ಎಳವೆಯಲ್ಲೇ ನಮಗೆ ಅತ್ಯಮೂಲ್ಯವೆನಿಸುತ್ತದೆ. ಆ ಕಾರಣಕ್ಕಾಗಿಯೇ ಆಕೆಯ ಮೇಲಿನ ಗೌರವ, ಭಕ್ತಿ, ನಂಬಿಕೆ, ಅಮ್ಮನನ್ನು ದೈವತ್ವಕ್ಕೇರಿಸುತ್ತದೆ ಮತ್ತು ಅದೇ ಆಕೆಯ ಶೋಷಣೆಯ ಮೂಲವೂ ಆಗುತ್ತದೆ. ಆಕೆಯ ಸ್ವಾತಂತ್ರ್ಯದ ಹರಣವೂ ಆಗುತ್ತದೆ. ಆಕೆಗೆ ಸೇವಕಿಯ ಸ್ಥಾನವೂ ದೊರೆಯುತ್ತದೆ. ಆಕೆಯ ಮೇಲೆ ನಿಯಂತ್ರಣವೂ ತೀವ್ರವಾಗುತ್ತದೆ.
ಹಣವಂತರ ಮನೆಗಳಲ್ಲಿ ದುಡ್ಡಿನ ಕಾರಣಕ್ಕೆ ಸ್ವಲ್ಪ ಉತ್ತಮ ಸ್ಥಾನ ದೊರೆಯಬಹುದು. ಆದರೆ ಮಧ್ಯಮ ಮತ್ತು ಬಡ ಕುಟುಂಬಗಳಲ್ಲಿ, ಈ ಆತ್ಮವಂಚನೆ ಸಹಜವೆಂಬಂತೆ ನಡೆಯುತ್ತದೆ.
ಆಕೆಯ ಇನ್ನೊಂದು ಲಕ್ಷಣವೆಂದರೆ, ಅಮ್ಮ ಸ್ವಾರ್ಥದ, ಸಣ್ಣತನದ, ಅಜ್ಞಾನದ, ಅಸಮಾನತೆಯ, ಸಾಮಾಜಿಕ ಅಸ್ವಾಸ್ಥ್ಯತೆಯ, ಬದಲಾವಣೆ ಬಯಸದ ,ಕೆಲವೊಮ್ಮೆ ಭಾವುಕತೆಯ ಬ್ಲಾಕ್ ಮೇಲಿನ ಜನಕಳೂ ಹೌದು. ಎಷ್ಟೋ ಮಕ್ಕಳು ದಾರಿ ತಪ್ಪಲು ಅಮ್ಮ ಕಾರಣ ಎಂಬ ಆರೋಪವೂ ಇದೆ.
ಇಂದು ವ್ಯವಸ್ಥೆಯ ಶಿಥಿಲತೆಗೆ ಅಮ್ಮನ ಕೊಡುಗೆಯೂ ಗಮನಾರ್ಹವಾಗಿದೆ.
ಎಲ್ಲಾ ಅಮ್ಮಂದಿರೂ ಶ್ರೇಷ್ಠರಾಗಿದ್ದರೆ ಇಂದು ವ್ಯವಸ್ಥೆಯ ನರಳಾಟ ಇಷ್ಟೊಂದು ಇರುತ್ತಿರಲಿಲ್ಲ. ತಮ್ಮ ತಂದೆಯ, ತಮ್ಮ ಗಂಡನ, ತಮ್ಮ ಮಕ್ಕಳ ತಪ್ಪುಗಳನ್ನು, ಭ್ರಷ್ಟತೆಯನ್ನು ಆಕೆ ಸ್ವಾರ್ಥದಿಂದ ಅಜ್ಞಾನದಿಂದ ಎಲ್ಲವನ್ನೂ ಸಮರ್ಥಿಸುತ್ತಾಳೆ. ಅದಕ್ಕೆ ಸ್ವಲ್ಪ ಮಟ್ಟಿಗೆ ನಾವು ರೂಪಿಸಿರುವ ಅಮ್ಮನ ವ್ಯಕ್ತಿತ್ವದ ವ್ಯವಸ್ಥೆಯೂ ಕಾರಣವಾಗಿದೆ.
ಎಲ್ಲಾ ಸಂಬಂದಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಅಮ್ಮನ ಮೌಲ್ಯವೂ ಶಿಥಿಲಗೊಳ್ಳುತ್ತಿದೆ.
ಆಕೆಯನ್ನು ಕುರುಡಾಗಿ, ಆರಾಧನಾಪೂರ್ವಕವಾಗಿ, ನೋಡುವುದಕ್ಕಿಂತ, ವಾಸ್ತವ ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳೋಣ.
ಅತ್ಯಂತ ಅವಶ್ಯಕ
ಈ ಸಂಬಂದವನ್ನು ನಾವು ನಿಂತ ನೀರಾಗಲು ಬಿಡದೆ, ಆಧುನಿಕತೆಯ ನೆರಳಿನಲ್ಲಿ, ಮತ್ತೆ ಮತ್ತೆ ಪುನರ್ ರೂಪಿಸಿಕೊಳ್ಳಬೇಕಿದೆ. ಆ ಕಳಕಳಿಯೇ ನಮ್ಮ ಆಶಯ.
ನಿಮ್ಮ ಮನಸ್ಸಿಗೆ ನೋವಾಗಿರುತ್ತದೆ. ಆದರೂ ಕ್ಷಮಿಸಿ. ಸತ್ಯ ಸ್ವಲ್ಪ ಕಹಿ.
ಏಕೆಂದರೆ,
ಏನೇ ವಿವರಣೆಗಳನ್ನು ನೀಡಿದರೂ,
ಇದೊಂದು ಅರಿವಿನ ತೊಳಲಾಟ,
ವಾಸ್ತವದ ಹುಡುಕಾಟ,
ಅವಶ್ಯಕತೆ ಮತ್ತು ಅನಿವಾರ್ಯಗಳ ನಡುವಿನ ಜೊತೆಯಾಟ, ಮತ್ತೆ ಮತ್ತೆ ಅದೇ ಪದಗಳು ವಾಕ್ಯಗಳು ಅರ್ಥಗಳು ಭಾವಗಳು ಪುನರಾವರ್ತನೆಯಾಗುತ್ತದೆ.
ಸಮಾಜದ ಶಾಂತಿಯ ದೃಷ್ಟಿಯಿಂದ ಅಮ್ಮ ಇನ್ನಷ್ಟು ಜವಾಬ್ದಾರಿ ಹೊಂದಲಿ ಇನ್ನಷ್ಟು ಹೆಚ್ಚು ಪ್ರಬುದ್ದವಾಗಲಿ.
ಇದು ಒಂದು ಅಭಿಪ್ರಾಯ ಮಾತ್ರ. ಪ್ರತಿಕ್ಷಣವೂ ಆಕೆಯ ಒಳಿತನ್ನೇ ನಮ್ಮೆಲ್ಲರ ಮನಸ್ಸು ಬಯಸುತ್ತದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.