
ಬೆಳಗಾವಿ ಕೈಗಾರಿಕಾ ಪ್ರದೇಶಗಳಲ್ಲಿ ನೀರಿನ ಸಮಸ್ಯೆ: K.I.A.D.B. ವಿರುದ್ಧ ಟೋಪಣ್ಣವರ ಆಕ್ರೋಶ
ಬೆಳಗಾವಿ:ಹಿಡಕಲ್ ಜಲಾಶಯದಿಂದ ಕೈಗಾರಿಕಾ ಬಳಕೆಗಾಗಿ 4 ಟಿ.ಎಮ್.ಸಿ. ನೀರು ಮೀಸಲಾಗಿದ್ದು, ಅದರಲ್ಲಿ ಕೇವಲ 0.58 ಟಿ.ಎಮ್.ಸಿ. ಮಾತ್ರ ಬಳಸಲಾಗುತ್ತದೆ ಎಂದು K.I.A.D.B. ಪ್ರಸ್ತಾಪಿಸಿದೆ. ಆದರೆ, ಬೆಳಗಾವಿಯ ಪ್ರಮುಖ ಕೈಗಾರಿಕಾ ಪ್ರದೇಶಗಳಾದ ಉದ್ಯಮಬಾಗ, ಮಚ್ಚೆ, ಕನಬರ್ಗಿ, ಹೊನಗಾ ಮತ್ತು ಕಣಗಾಲ ಕೈಗಾರಿಕಾ ಪ್ರದೇಶಗಳಿಗೆ ನೀರಿನ ಅಗತ್ಯತೆಗಳನ್ನು ಪೂರೈಸಲು K.I.A.D.B. ಯಾವುದೇ ಸಮರ್ಪಕ ಯೋಜನೆಗಳನ್ನು ರಚಿಸಿಲ್ಲ ಎಂಬ ಆರೋಪಗಳು ಮುಂದಿಟ್ಟಿವೆ.

ಉದ್ಯಮಬಾಗದ ಕಾರ್ಖಾನೆಗಳ ಮಾಲಕರು K.I.A.D.B. ವಿರುದ್ಧ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡದೆ, ಹಣ ವಸೂಲಿ ಮಾಡಲು ಯತ್ನಿಸುತ್ತಿರುವುದಾಗಿ K.I.A.D.B. ವಿರುದ್ಧ ಕಾನೂನು ಹೋರಾಟವು ಮುಂದುವರೆದಿದೆ. ಈ ನಿರ್ಲಕ್ಷ್ಯದಿಂದ ಸ್ಥಳೀಯ ಕೈಗಾರಿಕೆಗಳು ತೀವ್ರ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಉದ್ಯಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೆ, K.I.A.D.B. ಈಗ ಬೆಳಗಾವಿಯಿಂದ ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ಮಾರ್ಗಾಂತರಿಸಲು ನಿರ್ಧಾರ ಕೈಗೊಂಡಿದ್ದು, ಸ್ಥಳೀಯ ಕೈಗಾರಿಕೆಗಳ ಪ್ರಗತಿಗೆ ತೀವ್ರ ಹೊಡೆತ ನೀಡುತ್ತದೆ ಎಂಬ ಅಪಾಯವಿದೆ.
ಈ ಬಗ್ಗೆ ರಾಜಕುಮಾರ್ ಟೋಪಣ್ಣವರ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ, ಸಚಿವ ಎಂ. ಬಿ. ಪಾಟೀಲ್ ಅವರನ್ನು ಬೆಳಗಾವಿಗೆ ಬಂದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಾರ್ಖಾನೆ ಮಾಲಕರೊಂದಿಗೆ ಸಭೆ ನಡೆಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರಿನ ಪೂರೈಕೆ ಖಚಿತಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ ವ್ಯಕ್ತವಾಗಿದೆ.