
ಗಾಯಗೊಂಡ, ಮನೆಯಿಂದ ಹೊರಹಾಕಲ್ಪಟ್ಟ ಸಾಕುಪ್ರಾಣಿಗಳಿಗೆ: ಮೂರು ಕಡೆ ಪ್ರಾಣಿ ಕಲ್ಯಾಣ ಕೇಂದ್ರ
ಬೆoಗಳೂರು: ಗಾಯಗೊಂಡ, ಮನೆಯಿಂದ ಹೊರಹಾಕಲ್ಪಟ್ಟ ಸಾಕುಪ್ರಾಣಿಗಳು ಮತ್ತು ಆರೈಕೆ ಅಗತ್ಯವಿರುವ ಪ್ರಾಣಿಗಳಿಗಾಗಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮೂರು ಕಡೆ ಪ್ರಾಣಿಗಳ ಕಲ್ಯಾಣ ಕೇಂದ್ರ ಸ್ಥಾಪಿಸಲು ಬಿಬಿಎಂಪಿ ಚಿಂತಿಸಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಾಣಿಗಳು ರಸ್ತೆ ಅಪಘಾತದಲ್ಲಿ ಗಾಯಗೊಳ್ಳುತ್ತಿದೆ. ಅಲ್ಲದೇ ಜನರಿಗೆ ಇರುವ ಅಧಿಕ ಒತ್ತಡದಿಂದ ಸಾಕು ಪ್ರಾಣಿಗಳನ್ನು ಸಾಕಲಾಗುತ್ತಿಲ್ಲ. ಆದ್ದರಿಂದ ಅವುಗಳನ್ನು ಖಾಸಗಿ ರಕ್ಷಣಾ ಕೇಂದ್ರಗಳಿಗೆ ಕಳುಹಿಸುವ ಬದಲು ಪ್ರಾಣಿಗಳ ಕಲ್ಯಾಣ ಕೇಂದ್ರ ಸ್ಥಾಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.

ದಾಸರಹಳ್ಳಿಯಲ್ಲಿ ಕೇಂದ್ರ:ಪ್ರಾಣಿಗಳ ಕಲ್ಯಾಣ ಕೇಂದ್ರ ಸ್ಥಾಪಿಸಲು ಇತ್ತೀಚೆಗೆ ಪ್ರಾಣಿ ಪ್ರಿಯರು ಬಿಬಿಎಂಪಿಗೆ ಸಾಕಷ್ಟು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ದಾಸರಹಳ್ಳಿಯಲ್ಲಿ ತನ್ನದೇ ಆದ ಕೇಂದ್ರ ಸ್ಥಾಪಿಸುತ್ತಿದೆ. ಅಲ್ಲದೆ, ಬೆಂಗಳೂರು ಪೂರ್ವ ಮತ್ತು ದಕ್ಷಿಣದಲ್ಲಿಇದೇ ರೀತಿಯ ಎರಡು ಕೇಂದ್ರಗಳನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
200 ಪ್ರಾಣಿ ನಿರ್ವಹಿಸುವ ಗುರಿ:ಬಿಬಿಎಂಪಿ ಪ್ರತಿ ಕೇಂದ್ರದಲ್ಲಿ 200 ಪ್ರಾಣಿಗಳನ್ನು ನಿರ್ವಹಿಸುವ ಗುರಿ ಹೊಂದಿದೆ ಮತ್ತು ಒಟ್ಟಾರೆಯಾಗಿ ಈ ಮೂರು ಕೇಂದ್ರಗಳಲ್ಲಿ ಪ್ರತಿ ತಿಂಗಳು 500 ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲಿದೆ. ಇದುವರೆಗೂ ಬಿಬಿಎಂಪಿ ತನ್ನದೇ ಆದ ಪ್ರಾಣಿ ರಕ್ಷಣಾ ಕೇಂದ್ರವನ್ನು ಹೊಂದಿರಲಿಲ್ಲ. ಪಶುಸಂಗೋಪನಾ ಇಲಾಖೆಗೆ ಪ್ರಾಣಿಗಳ ರಕ್ಷಣೆಗಾಗಿ ಕರೆ ಬಂದಾಗ ಅಥವಾ ಕೈಬಿಟ್ಟ ಮತ್ತು ಗಾಯಗೊಂಡ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಮನವಿ ಬಂದಾಗಲೆಲ್ಲಾ, ನಾವು ಅವುಗಳನ್ನು ಖಾಸಗಿ ರಕ್ಷಣಾ ಕೇಂದ್ರಗಳಿಗೆ ಕಳುಹಿಸುತ್ತಿದ್ದೆವು.
ಪ್ರಾಣಿಗಳನ್ನು ಅಲ್ಲಿಯೇ ನೋಡಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಅವು ಸುಧಾರಿಸಿಕೊಂಡ ನಂತರ, ಅವುಗಳನ್ನು ಅದೇ ಸ್ಥಳಕ್ಕೆ ಹಿಂತಿರುಗಿಸಲಾಗುತ್ತಿತು ಎಂದು ಬಿಬಿಎಂಪಿ ಆರೋಗ್ಯ ಮತ್ತು ಪಶುಸಂಗೋಪನೆ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಹೇಳಿದ್ದಾರೆ.
ಬಿಬಿಎಂಪಿಗೆ ಸಾಕಷ್ಟು ಕರೆ:ಪ್ರತಿದಿನ ನಗರದಾದ್ಯಂತ ಪ್ರಾಣಿಗಳ ರಕ್ಷಣೆಗಾಗಿ ಮನವಿ ಪಡೆಯುತ್ತಿದ್ದೇವೆ. ಇನ್ನು ಬೀದಿ ನಾಯಿ ಅಪಘಾತ ಮತ್ತು ಬೆಕ್ಕಿನ ಗಾಯಗಳು ಇತ್ಯಾದಿಗಳಿಗೆ ಸಂಬoಧಿಸಿದ ಕರೆಗಳು ನಮಗೆ ಬರುತ್ತವೆ. ಜನರು ಕೈಬಿಟ್ಟ ಸಾಕುಪ್ರಾಣಿಗಳನ್ನು ನೋಡಿದಾಗ ಬಿಬಿಎಂಪಿಗೆ ಕರೆ ಮಾಡುತ್ತಾರೆ. ನಾವು ಖಾಸಗಿ ರಕ್ಷಣಾ ಕೇಂದ್ರಗಳೊoದಿಗೆ ಸಮನ್ವಯ ಸಾಧಿಸುತ್ತೇವೆ ಮತ್ತು ವಿನಂತಿಗಳನ್ನು ಪೂರೈಸುತ್ತೇವೆ, ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಎಂಟು ವಲಯ ವಿಸ್ತರಣೆಗೆ ಚಿಂತನೆ:ಪ್ರಸ್ತುತ, ಬಿಬಿಎಂಪಿ ಮೂರು ವಲಯಗಳಲ್ಲಿ ಈ ಕೇಂದ್ರ ಸ್ಥಾಪಿಸಲಿದೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ, ನಾಗರಿಕ ಸಂಸ್ಥೆಯು ಅದನ್ನು ಎಂಟು ವಲಯಗಳಲ್ಲಿ ವಿಸ್ತರಿಸಬಹುದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ದಾಸರಹಳ್ಳಿಯಲ್ಲಿ ಪ್ರಾಣಿ ಕಲ್ಯಾಣ ಕೇಂದ್ರವನ್ನು ಸ್ಥಾಪಿಸುವ ಕೆಲಸ ಪ್ರಾರಂಭವಾಗಿದೆ.
ಸುರಲ್ಕರ್ ವಿಕಾಸ್, ಪಶುಸಂಗೋಪನೆ ವಿಶೇಷ ಆಯುಕ್ತ