ನ್ಯಾಯಾಲಯದ ತೀರ್ಪು ಬೇರೆ ಕಡೆ ಪ್ರಶ್ನಿಸಬಹುದೆ..?

ನ್ಯಾಯಾಲಯದ ತೀರ್ಪುಗಳನ್ನು ನ್ಯಾಯಾಲಯ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಪ್ರಶ್ನಿಸಬಹುದೇ ? ವಿಮರ್ಶಿಸಬಹುದೇ ? ಪ್ರತಿಭಟಿಸಬಹುದೇ ? ತಿರಸ್ಕರಿಸಬಹುದೇ ? ಉಲ್ಲಂಘಿಸಬಹುದೇ ? ಎಂಬ ಕೆಲವು ಅನುಮಾನಗಳು ಕಾಡುತ್ತಿರಬಹುದು. ಅದಕ್ಕಾಗಿ ಒಂದು ಸರಳ ರೀತಿಯ ಮಾಹಿತಿ.

promotions

" ನ್ಯಾಯಾಲಯಗಳು ಕಾನೂನು ನೀಡುತ್ತದೆ. ಆದರೆ ನ್ಯಾಯವನ್ನೇ ನೀಡುತ್ತವೆ ಎಂಬ ಖಚಿತತೆ ಇಲ್ಲ "

promotions

ಹಾಗೆಯೇ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟಿಸ್ ವಿ.ಆರ್. ಕೃಷ್ಣ ಅಯ್ಯರ್ ನಿವೃತ್ತಿಯ ನಂತರ ಒಮ್ಮೆ ಹೇಳಿದ ಮಾತು " ಸುಪ್ರೀಂ ಕೋರ್ಟಿನ ಪೂರ್ಣ ಪೀಠದ ಯಾವುದೇ ಆದೇಶ ಅಂತಿಮ ಸತ್ಯವೇನಲ್ಲ. ಆದರೆ ಅದರ ಮೇಲೆ ಬೇರೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಅದು ನೀಡುವ ತೀರ್ಪೇ ಅಂತಿಮ "

promotions

ಜೊತೆಗೆ ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗ ಒಂದು ಮಿತಿಗೆ ಒಳಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದೇ ಹೊರತು ನಿಜವಾದ ಅಧಿಕಾರ ಇರುವುದು ಶಾಸಕಾಂಗದ ಹಿಡಿತದಲ್ಲಿ. ಈ ಶಾಸಕಾಂಗದ ಮೇಲುಸ್ತುವಾರಿ ಸಂವಿಧಾನ ನಿಯಂತ್ರಿಸುತ್ತದೆ.

ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಶಾಸಕಾಂಗ ಕಾರ್ಯನಿರ್ವಹಿಸುತ್ತದೆ ಮತ್ತು ಕಾಲಕಾಲಕ್ಕೆ ಬದಲಾವಣೆ ಅವಶ್ಯಕತೆ ಎನಿಸಿದರೆ ಕಾನೂನುಗಳಿಗೆ ತಿದ್ದುಪಡಿ ಮಾಡುತ್ತದೆ.

ಕಾರ್ಯಾಂಗ ಶಾಸಕಾಂಗದ ಒಂದಷ್ಟು ಮಾರ್ಗದರ್ಶನದಲ್ಲಿ ಕಾನೂನು ಜಾರಿಗೊಳಿಸುತ್ತದೆ. ನ್ಯಾಯಾಂಗ ಇದನ್ನು ಅರ್ಥೈಸುತ್ತದೆ.

ಹೀಗೆ ಸಾಗುತ್ತಿದ್ದ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗ ಮತ್ತು ಕಾರ್ಯಾಂಗ ಹೆಚ್ಚು ಭ್ರಷ್ಟಾಚಾರ ಸ್ವಜನ ಪಕ್ಷಪಾತ ದೌರ್ಜನ್ಯ ಮುಂತಾದವುಗಳ ಹೆಚ್ಚಾದ ಕಾರಣ ಮತ್ತು ಜನ ಹೆಚ್ಚು ಜಾಗೃತರಾಗಿದ್ದು ಹಾಗು ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಿಂದ ಕಳೆದ ಹತ್ತು ಹದಿನೈದು ವರ್ಷಗಳ ಅವಧಿಯಲ್ಲಿ ನ್ಯಾಯಾಂಗ ಹೆಚ್ಚು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

ಇದು ಒಳ್ಳೆಯ ಮತ್ತು ಕೆಟ್ಟ ಎರಡೂ ಪರಿಣಾಮಗಳಿಗೆ ಕಾರಣವಾಯಿತು. ಕಾನೂನಿನ ಮುಖಾಂತರವೇ ಎಲ್ಲಕ್ಕೂ ಪರಿಹಾರ ಹುಡುಕುವ ಪ್ರಯೋಗ ಜೊತೆಗೆ ಕಾನೂನಿನ ದುರುಪಯೋಗ ಮಾಡುವ ಹೊಸ ಮಾರ್ಗ ಹುಡುಕಲಾಯಿತು. ಮುಖ್ಯವಾಗಿ ಬಹುತೇಕ ಎಲ್ಲಾ ರಾಜ್ಯಗಳ ಶಾಸನಸಭೆಯ ಸ್ಪೀಕರ್ ಗಳ ತೀರ್ಪುಗಳು, ಶಾಸಕರ ಮಾರಾಟ ಅನರ್ಹತೆ ಪಕ್ಷಾಂತರ ಆಪರೇಷನ್ ಎಂ ಎಲ್ ಎ ಮುಂತಾದ ವಿಷಯದಲ್ಲಿ ನ್ಯಾಯಾಂಗ ಹೆಚ್ಚು ನಿಯಂತ್ರಣ ಪಡೆಯಿತು. ಜೊತೆಗೆ ಭ್ರಷ್ಟಾಚಾರ ವಿಷಯದಲ್ಲೂ ಹೆಚ್ಚು ಅಧಿಕಾರ ಚಲಾಯಿಸಿತು. ಕೆಲವು ಸಂದರ್ಭಗಳಲ್ಲಿ ದೊಡ್ಡ ಅಧಿಕಾರದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿ ತನ್ನ ಧೈರ್ಯ ಪ್ರದರ್ಶಿಸಿತು.

ಈ ಘರ್ಷಣೆಯಲ್ಲಿ ನ್ಯಾಯಾಂಗ ಜನರ ದೃಷ್ಟಿಯಲ್ಲಿ ಹೆಚ್ಚು ವಿಶ್ವಾಸಾರ್ಹತೆ ಗಳಿಸಿತು. ಸಾರ್ವಜನಿಕರು ಶಾಸಕಾಂಗ ಮತ್ತು ಕಾರ್ಯಾಂಗಕ್ಕಿಂತ ನ್ಯಾಯಾಂಗದ ಮೇಲೆ ಹೆಚ್ಚು ನಂಬಿಕೆ ಬೆಳೆಸಿಕೊಂಡರು.

ಈಗೀಗ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ವಿಷಯಗಳಲ್ಲಿ ಸಹ ಆಡಳಿತಾತ್ಮಕ ನಿರ್ಧಾರಗಳನ್ನು ಬುಡಮೇಲು ಮಾಡಿ ನ್ಯಾಯಾಂಗವೇ ನಿರ್ಧಾರ ಮಾಡುವ ಕೆಲವು ಘಟನೆಗಳು ನಡೆದವು.

ಹಾಗೆಯೇ ನ್ಯಾಯಾಲಯದ ಅನೇಕ ವಾದ ವಿವಾದಗಳು ‌ಹೆಚ್ಚು ಕಡಿಮೆ ಮಾಧ್ಯಮಗಳಲ್ಲಿ ನೇರ ಪ್ರಸಾರದ ರೀತಿ ಪ್ರಚಾರ ಮಾಡಲಾಯಿತು. ಪರ ವಿರುದ್ಧದ ವಕೀಲಿಕೆ ಜನರು ಸಹ ನ್ಯಾಯಾಲಯದ ಬಗ್ಗೆ ಮಾತನಾಡಲು ಪ್ರೇರೇಪಿಸಿತು. ಅದರ ಪರಿಣಾಮ ಈಗ ನ್ಯಾಯ ವಿಮರ್ಶೆ ಎಲ್ಲೆಲ್ಲೂ ನಡೆಯುತ್ತಿದೆ.

ಈ‌ ಸಂದರ್ಭದಲ್ಲಿ ಹಿಜಾಬ್ ಬಗ್ಗೆ ಕರ್ನಾಟಕದ ಮುಖ್ಯ ನ್ಯಾಯಾಲಯದ ತೀರ್ಪು ಬಂದಿದೆ. ಆ ಹಿನ್ನೆಲೆಯಲ್ಲಿ.

ನ್ಯಾಯಾಲಯದ ತೀರ್ಪುಗಳನ್ನು ವಿಮರ್ಶಿಸಬಹುದು. ವಿರೋಧ ವ್ಯಕ್ತಪಡಿಸಬಹುದು. ಅದರ ಬಗ್ಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಅನುಮಾನ ಪಡಬಹುದು. ಅಸಮಾಧಾನ ಹೇಳಬಹುದು. ಆದರೆ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಬಾರದು. ಅದನ್ನು ಒಪ್ಪಿಕೊಳ್ಳಲೇ ಬೇಕು ಮತ್ತು ಅದನ್ನು ಜಾರಿಗೊಳಿಸಲೇ ಬೇಕು. ಇಲ್ಲದಿದ್ದರೆ ಅದು ನ್ಯಾಯಾಂಗ ನಿಂದನೆ ಎಂಬ ಅಪರಾಧ ಮಾಡಿದಂತೆ ಆಗುತ್ತದೆ.

ಇದು ಅತ್ಯಂತ ಸರಿಯಾದ ಕ್ರಮ ಸಹ. ಏಕೆಂದರೆ ಸರಿಯೋ ತಪ್ಪೋ, ನ್ಯಾಯವೋ ಅನ್ಯಾಯವೋ ನ್ಯಾಯಾಲಯ ಒಂದು ವ್ಯವಸ್ಥೆಯನ್ನು ಮುನ್ನಡೆಸುತ್ತಿದೆ. ಅದನ್ನು ತಿರಸ್ಕರಿಸಿದರೆ ಇಡೀ ವ್ಯವಸ್ಥೆ ಕುಸಿದು ಬೀಳುತ್ತದೆ.

ಹೌದು ನ್ಯಾಯಾಲಯದ ಮೇಲೆ ಸಹ ಕೆಲವು ಭ್ರಷ್ಟಾಚಾರದ ಆರೋಪ ಇದೆ. ಅದರ ನಡುವೆಯೂ ಭಾರತದ ನ್ಯಾಯ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಮೇಲ್ಮನವಿ ಸಲ್ಲಿಸಬಹುದಾದ ವ್ಯವಸ್ಥೆ ಇದೆ.

ಇದರ ನಡುವೆ ನ್ಯಾಯಾಲಯವೂ ಒತ್ತಡಕ್ಕೆ ಒಳಗಾಗಿದೆ. ನ್ಯಾಯಾಧೀಶರು ಸಹ ಸಿದ್ದಾಂತಗಳ ಬಲೆಯೊಳಗೆ ಸಿಲುಕಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಇದು ತುಂಬಾ ಅಪಾಯಕಾರಿ. ಇದರ ಅರ್ಥ ಒಟ್ಟು ವ್ಯವಸ್ಥೆ ಮಾನವೀಯ ಮೌಲ್ಯಗಳ ಕುಸಿತದ ಹಾದಿಯಲ್ಲಿದೆ. ಈಗಲೇ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.

Read More Articles