ಹಿಂದೂ ಶಬ್ದದ ಉತ್ಪತ್ತಿ ಮತ್ತು ಅದರ ಮೂಲ ಪರ್ಶಿಯನ್ ಭಾಷೆಯೇ...?

ಇತ್ತಿಚಿಗೆ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಸತೀಶ್ ಜಾರಕಿಹೊಳೆಯವರು ಹಿಂದೂ ಶಬ್ದ ಪರ್ಶಿಯನ್ ಭಾಷೆಯದು ಇದೆ ಮತ್ತು ಅದರ ಅರ್ಥ ಅಶ್ಲೀಲವಾಗಿದೆ ಎಂದು ಹೇಳಿಕೆ ನೀಡಿದ ನಂತರ, ಈ ಶಬ್ದದ ಮೂಲದ ಬಗ್ಗೆ ಚರ್ಚೆಯು ಪ್ರಾರಂಭವಾಗಿದೆ. ಈ ಲೇಖನದಲ್ಲಿ ಹಿಂದೂ ಧರ್ಮದ ಮೂಲ ಮತ್ತು ಉತ್ಪತ್ತಿಯ ಬಗ್ಗೆ ನೀಡಲಾಗಿದೆ. ಬುದ್ಧಿಜೀವಿಗಳು ಹಿಂದೂ ಶಬ್ದದ ಬಗ್ಗೆ ಅಪಪ್ರಚಾರ ಮಾಡಿದ ಪರಿಣಾಮವಾಗಿ ಅನೇಕ ತಪ್ಪು ಕಲ್ಪನೆಗಳು ನಿರ್ಮಾಣವಾಗಿದೆ. ಅದಕ್ಕೆ ಯೋಗ್ಯ ಅಧ್ಯಯನ ಇದರಲ್ಲಿ ನೀಡಲಾಗಿದೆ.ವೇದಗಳಲ್ಲಿ ಹಿಂದೂ ಶಬ್ದವಿಲ್ಲ ಎಂದು ಹೇಳುವುದು ಅಯೋಗ್ಯವಾಗಿದೆ.

promotions

ಹಿಂದೂ ಶಬ್ದವು ವೇದಗಳಲ್ಲಿನ ಸಿಂಧೂ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಸ ಅಕ್ಷರವು ಹದಲ್ಲಿ ರೂಪಾಂತರವಾಗಿ ಸಿಂಧೂವಿನಿಂದ ಹಿಂದೂ ಶಬ್ದ ತಯಾರಾಗಿದೆ. ಸ ಮತ್ತು ಹ ಎಂಬ ಶಬ್ದಗಳಲ್ಲಿ ವೇದಾದಿ ಗ್ರಂಥಗಳಿಗನುಸಾರ ಭೇದವಿಲ್ಲ. ಋಗ್ವೇದದ ಹತ್ತನೇ ಮಂಡಲದಲ್ಲಿ, ಹಾಗೆಯೇ ಮೂರನೇ ಮಂಡಲದಲ್ಲಿನ ನದೀಸೂಕ್ತದಲ್ಲಿ ಮತ್ತು ಅಥರ್ವವೇದದಲ್ಲಿ ಸಿಂಧೂ ಶಬ್ದವಿದೆ. ಸಂಸ್ಕೃತದಲ್ಲಿ ಸವು ಹದಲ್ಲಿ ರೂಪಾಂತರವಾಗಿರುವುದು ಪಾಣಿನೀಯ ವ್ಯಾಕರಣ ಕ್ಕನುಸಾರ ಯೋಗ್ಯವಾಗಿದೆ. 

promotions

ಯಜುರ್ವೇದದ ಮಂತ್ರದಲ್ಲಿನ ಶವು ತೈತ್ತೀರಿಯ ಅರಣ್ಯಕದಲ್ಲಿ ಹದಲ್ಲಿ ರೂಪಾಂತರವಾಗಿದೆ. ಪ್ರಾಕೃತ ಭಾಷೆಯಲ್ಲೂ ಸಹ ಹೀಗೆ ಉಲ್ಲೇಖ ಇದೆ. ಇದು ಎಲ್ಲ ಭಾಷೆಗಳಲ್ಲಿ ಹೀಗೆ ಶಬ್ದಗಳು ರೂಪಾಂತರವಾಗುತ್ತದೆ. ಉದಾಹರಣೆಗೆ ಅಸ್ಸಾಂ ಮೇಲೆ ಅಷ್ಟೊಂದು ಇಸ್ಲಾಮೀ ಆಕ್ರಮಣ ಆಗಲಿಲ್ಲ. ಹಾಗಾಗಿ ಅಸ್ಸಾಮಿ ಭಾಷೆಯ ಮೇಲೆ  ಪಾರ್ಸಿ ಮತ್ತು ಅರಬಿ ಭಾಷೆಗಳ ಪ್ರಭಾವ ಬೀಳಲಿಲ್ಲ. ಆದರೂ ಸಹ ಅಸ್ಸಾಮಿ ಭಾಷೆಯಲ್ಲಿ ‘ಸವು ‘ಹದಲ್ಲಿ ರೂಪಾಂತರವಾದ ಅನೇಕ ಶಬ್ದಗಳಿವೆ. 

promotions

ಉದಾ:ಸಂಕೋಚ-ಹಂಕೋಚ, ಸಂಗತಿ-ಹಂಗತಿ, ಸಂತಾನ-ಹಂತಾನ, ಸಂಚಾರ-ಹಂಚಾರ. ಹಿಂದಿ ಭಾಷೆಯಲ್ಲೂ ಪಾಷಾಣವು ಪಾಹನ ಮತ್ತು ಕೇಸರಿಯು ಕೇಹರಿ ಆಗಿದೆ. ಹರಿಯಾಣದಲ್ಲಿ ‘ಹೈಯ ಬದಲು ‘ಸೈ ಎಂದು ಹೊಂದಿಸಲಾಗುತ್ತದೆ. ಸೌರಾಷ್ಟ್ರದಲ್ಲಿ ‘ಶಕ್ಕರ್ವು ‘ಹಕ್ಕರ್ ಎಂದಾಗುತ್ತದೆ. ಹೀಗೆ ಹಲವು ಭಾಷೆಗಳಲ್ಲಿ ಸ ಅಕ್ಷರವು ಹ ಅಕ್ಷರವಾಗಿ ರೂಪಾಂತರವಾಗಿದೆ.

ಸನಾತನ ಧರ್ಮದಲ್ಲಿ ಯಾರಾದರೊಬ್ಬರನ್ನು ಅನೇಕ ಹೆಸರುಗಳಿಂದ ಗುರುತಿಸುವ ಪರಂಪರೆಯಿರುವುದರಿಂದ ಹಿಂದೂ ಶಬ್ದವು ಸನಾತನ ಧರ್ಮದ್ದೇ ಒಂದು ಹೆಸರಾಗಿದೆ.
ಸನಾತನ ಧರ್ಮದಲ್ಲಿ ಒಂದೇ ವಸ್ತು, ಪ್ರಾಣಿ, ವನಸ್ಪತಿ ಮತ್ತು ವ್ಯಕ್ತಿಗಳಿಗೆ ಅನೇಕ ಹೆಸರುಗಳಿರುವ ಪರಂಪರೆಯಿದೆ. ಸಂಸ್ಕೃತದಲ್ಲಿ ನೀರು ಎಂಬ ಶಬ್ದವನ್ನು ನೀರ, ಜಲ, ಉದಕ ಮುಂತಾದ ೧೦ ಕ್ಕಿಂತಲೂ ಹೆಚ್ಚು ಹೆಸರುಗಳಿಂದ ಗುರುತಿಸಲಾಗುತ್ತದೆ. ಹಾಗೆಯೇ ಕಿಶೋರ ಎಂಬ ವ್ಯಕ್ತಿಯು ಬಾಲ್ಯದಲ್ಲಿ ಮನೆಯಲ್ಲಿ ಕಿಶೂ ಎಂದು ಪರಿಚಿತನಾಗಿರುತ್ತಾನೆ. ನಂತರ ವಿದ್ಯಾರ್ಥಿ ಜೀವನದಲ್ಲಿ ಅವನು ಕಿಶೋರ ಎಂದು ಪರಿಚಿತನಾಗಿರುತ್ತಾನೆ. 

ವೈದ್ಯಕೀಯ ಶಿಕ್ಷಣವಾದ ನಂತರ ಸಮಾಜದಲ್ಲಿನ ಜನರು ಅವನನ್ನು ಡಾಕ್ಟರ್ ಎನ್ನುತ್ತಾರೆ. ವಿವಾಹದ ನಂತರ ಪತ್ನಿಯ ತವರಿನಲ್ಲಿ ಅವನು ಕಿಶೋರರಾವ್ ಎಂದೆನಿಸಿಕೊಳ್ಳುತ್ತಾನೆ ಮತ್ತು ಮಕ್ಕಳಿಗೆ ಅಪ್ಪನಾಗುತ್ತಾನೆ ಹಾಗೂ ವೃದ್ಧಾವಸ್ಥೆಯಲ್ಲಿ ಅವನು ಅಜ್ಜನಾಗುತ್ತಾನೆ. ಒಬ್ಬ ವ್ಯಕ್ತಿ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ರೀತಿಯಲ್ಲಿ ಗುರುತಿಸಲ್ಪಡುತ್ತಾನೆ. ಹಿಂದೂ ಶಬ್ದವೂ ಅದೇ ರೀತಿಯಾಗಿದೆ. ಹಿಂದೂ ಎಂಬುದು ಕಾಲಕ್ಕನುಸಾರ ಸನಾತನ ಧರ್ಮದ್ದೇ ಒಂದು ಹೆಸರಾಗಿದೆ.

ಹಿಂದೂ ಎಂಬ ಹೆಸರು ವಿದೇಶೀ ಆಕ್ರಮಣಕಾರರು ಸನಾತನ ಧರ್ಮದವರಿಗೆ ನೀಡಲಾಗಿದೆಯಾ?

ಪ್ರಾಚೀನ ಕಾಲದಿಂದಲೂ ಈ ದೇಶದಲ್ಲಿನ ಜನರು  ಹಿಂದೂ ಎಂಬ ಹೆಸರಿನಿಂದ ಮತ್ತು ಈ ಭೂಪ್ರದೇಶವು ಹಿಂದೂಸ್ಥಾನ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ವಿವಿಧ ವಿದೇಶಿ ಆಕ್ರಮಣಕಾರರೂ ಸಿಂಧು ಶಬ್ದ ದಿಂದಲೇ ಸನಾತನ ಧರ್ಮದವರನ್ನು ಹಿಂದೂ ಎಂದು ಕರೆದಿದ್ದಾರೆ. ಭಾರತದಲ್ಲಿನ ಭಾಷೆಗಳಂತೆಯೇ ಅರಬಿ, ಇರಾನಿ ಮತ್ತು ಪಾರ್ಸಿ ಜನರು ಸ ವನ್ನು ಹ ಎಂದು ಉಚ್ಚರಿಸುತ್ತಾರೆ. ಅವರು ಮೊದಲಿನಿಂದಲೂ ಸಿಂಧುವನ್ನು ಹಿಂದು ಎಂದು ಉಚ್ಚರಿಸಿದ್ದಾರೆ. ಗ್ರೀಕ್ ಜನರು ಸಿಂಧುವಿನ ಉಚ್ಚಾರವನ್ನು ಇಂಡಸ್ ಎಂದು  ಮಾಡುತ್ತಾರೆ; ಆದ್ದರಿಂದ ಅವರು ಹಿಂದೂಗಳನ್ನು ಇಂಡಿಯನ್ ಎಂದು ಕರೆದರು. 

ಚೀನಿ  ಭಾಷೆಯಲ್ಲಿ ಸಿಂಧುವಿಗೆ ಶಿಂತೂ ಎನ್ನುತ್ತಾರೆ. ಆದ್ದರಿಂದಲೇ ಚೀನಿ ಪ್ರವಾಸಿ ಹ್ಯು-ಎನ್-ತ್ಸಾಂಗ್‌ನು ತನ್ನ ಲೇಖನಗಳಲ್ಲಿ ಭಾರತೀಯರನ್ನು ಚಿಂತೂ, ಶಿಂತೂ ಅಥವಾ ಹಿಂತೂ ಎಂಬ ಹೆಸರಿನಲ್ಲಿ ಉಲ್ಲೇಖಿಸಿದ್ದನು.
ಕ್ರೈಸ್ತ ಮತ್ತು ಮುಸಲ್ಮಾನ ಪಂಥಗಳ ಉಗಮಕ್ಕೂ ಮೊದಲಿನ ಪ್ರಾಚೀನ ಪಾರ್ಸಿ ಗ್ರಂಥದಲ್ಲೂ ‘ಹಿಂದೂ ಶಬ್ದ ಪ್ರಚಲಿತವಾಗಿದೆ.
ಮಹಮ್ಮದ ಪೈಗಂಬರ್ ಮತ್ತು ಯೇಸು  ಕ್ರಿಸ್ತರಿಗಿಂತಲೂ ಮೊದಲಿನಿಂದ ಹಿಂದೂ ಶಬ್ದ ಮತ್ತು ಅದರ ಬಳಕೆ ಅಸ್ತಿತ್ವದಲ್ಲಿತ್ತು. 

ಹಿಂದೂ ಎಂದರೆ ಸುಂದರ, ಸೌಮ್ಯ, ಸುಶೋಭಿತ, ದುಷ್ಟರ ದಮನದಲ್ಲಿ ದಕ್ಷನಾದ ಎಂದು ಅದರ  ಅರ್ಥವಿರುತ್ತಿತ್ತು. ಸಿಕಂದರನು ಆಗಿನ ಭಾರತಕ್ಕೆ ಬಂದು ಹಿಂದೂಕುಶ ಪರ್ವತಶ್ರೇಣಿ ಯನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದನು. ಈ ಪ್ರಾಚೀನ ಪರ್ವತವೇ ಹಿಂದೂ ಶಬ್ದವು ಪ್ರಾಚೀನವಾಗಿರುವುದಕ್ಕೆ ಸಾಕ್ಷಿಯಾಗಿದೆ.ಕ್ರೈಸ್ತ ಮತ್ತು ಮುಸಲ್ಮಾನ ಪಂಥಗಳ ಉಗಮದ ಮೊದಲು ಪಾರ್ಸಿ ಪಂಥವು ಪರ್ಶಿಯಾದಲ್ಲಿತ್ತು. 

ಪಾರ್ಸಿಗಳ ಅವೇಸ್ತಾ ಎಂಬ ಅತ್ಯಂತ ಪ್ರಾಚೀನ ಧರ್ಮಗ್ರಂಥದಲ್ಲಿ ಅಸುರವು ಅಹೂರ ಮತ್ತು ಸೋಮವು ಹೋಮ ಎಂದಾಗಿರುವುದು ಕಂಡುಬರುತ್ತದೆ. ಪಾರ್ಸಿ ವಾಙ್ಮಯದಲ್ಲಿನ ವೆಂದಿದಾತ ಎಂಬ ಗ್ರಂಥದಲ್ಲಿ ಹಿಂದೂ ಶಬ್ದವು ಸಪ್ತಸಿಂಧುವಿನ ಬದಲು ಹಪ್ತಹಿಂದೂವಾಗಿ ಮೊದಲು ಕಂಡುಬರುತ್ತದೆ. ವೆಂದಿದಾತ ಗ್ರಂಥವು ಜೀಸಸ್‌ನ ಸಮಕಾಲೀನ, ಅಂದರೆ ಅಂದಾಜು ೨೦೦೦ ವರ್ಷಗಳಷ್ಟು ಹಿಂದಿನದ್ದಾಗಿದೆ. ತಾತ್ಪರ್ಯವೆಂದರೆ ಸಿಂಧು ಶಬ್ದದಿಂದಲೇ ಹಿಂದೂ ಶಬ್ದ ನಿರ್ಮಾಣವಾಗಿದೆ ಹಾಗೂ ಕ್ರೈಸ್ತ ಮತ್ತು ಮುಸಲ್ಮಾನ ಪಂಥಗಳ ಉಗಮಕ್ಕೂ ತುಂಬಾ ಮೊದಲೇ ಅದರ ಪ್ರಸಾರವಾಗಿದೆ.

ಹಿಂದೂ ಎಂಬ ಶಬ್ದವು ಸನಾತನ ಧರ್ಮದವರ ವಿವಿಧ ಸ್ಮೃತಿಗಳಿಂದ ಪವಿತ್ರವಾಗಿದೆ !
ಅರಬ, ತುರ್ಕ ಮತ್ತು ಮೊಗಲ ಆಕ್ರಮಣಕಾರರೊಂದಿಗೆ ನಡೆದ ಸುದೀರ್ಘ ಸಂಘರ್ಷದಲ್ಲಿ ಹಿಂದೂ ಎಂಬ ಹೆಸರು ಸನಾತನ ಧರ್ಮೀಯ ರಾಷ್ಟ್ರವಾಸಿಗಳ ಸುಖ-ದುಃಖ, ಜಯ-ಪರಾಜಯ, ತ್ಯಾಗ ಮತ್ತು ಬಲಿದಾನ ಇವುಗಳ ಸ್ಮೃತಿಗಳಿಂದ ಪವಿತ್ರವಾಗಿದೆ. ಆದುದರಿಂದ ಸಿಂಧೂ ಸಂಸ್ಕೃತಿಗೆ ಅಹಿಂದೂ ಪಂಥದವರು ಹಿಂದೂವೆಂದು ಕರೆದರು; ಆದ್ದರಿಂದ ಅದರ ಅವಹೇಳನ ಮಾಡುವುದು ಅಸ್ಮಿತಾಶೂನ್ಯತೆಯ ಲಕ್ಷಣವಾಗಿದೆ.

ಪಾರ್ಸಿ ಶಬ್ದಕೋಶದಲ್ಲಿ ಹಿಂದೂ ಶಬ್ದದ ಅರ್ಥ ನಿಂದಾಸೂಚಕವಾಗಿಲ್ಲ !

ಪಾರ್ಸಿ  ಶಬ್ದಕೋಶದಲ್ಲಿ ಹಿಂದೂ ಶಬ್ದದ ಅರ್ಥವನ್ನು ಹಿಂದದೇಶ ನಿವಾಸಿ, ಹಿಂದೂಸ್ತಾನದ ಧರ್ಮ, ಪ್ರಾಚೀನ ಹಿಂದ್‌ನ ರೀತಿರಿವಾಜುಗಳನ್ನು ನಂಬುವ, ತರುಣಿ ಯರ ಕೆನ್ನೆಯ ಮೇಲಿನ ಸೌಂದರ್ಯದ ಗುರುತಾದ ಕಪ್ಪು ತಿಲಕ ಎಂದು ನೀಡಲಾಗಿದೆ. ಅರಬಿ ಶಬ್ದಕೋಶದಲ್ಲಿ ಹಿಂದೂ ಶಬ್ದವು ಗೌರವಾನ್ವಿತವಾಗಿದೆ. ಅರಬಿ ಶಬ್ದಕೋಶದಲ್ಲಿ ಹಿಂದೂ ಶಬ್ದಕ್ಕೆ ಸಂಬಂಧಿಸಿದ ಮುಂದಿನ ೩ ಶಬ್ದ ಮತ್ತು ಅವುಗಳ ಅರ್ಥವನ್ನು ನೀಡಲಾಗಿದೆ.

ಅ. ಹಿಂದೂಸೀ = ಹಿಂದೂಧರ್ಮಾನುಯಾಯಿ
ಅ. ಅಲ್ ಹಿಂದ್ = ಭಾರತ
ಇ. ಹಿಂದ್ = ಸುಂದರ ಎಂದು ಅರ್ಥ

ಮಹಮ್ಮದ ಪೈಗಂಬರ್‌ರವರಿಗಿಂತಲೂ ೨೩೦೦ ವರ್ಷಗಳ ಮೊದಲಿನ ಲಬಿ-ಬಿನ್-ಎ-ಅಖತಬ-ಬಿನ್-ಎ-ತರ್ಫ ಎಂಬ ಪ್ರಸಿದ್ಧ ಕವಿಯು ಪುಣ್ಯಭೂಮಿ ಹಿಂದ್ ಮತ್ತು ಸಂಪೂರ್ಣ ಜಗತ್ತಿಗೆ ಬೆಳಕನ್ನು ನೀಡುವ ನಾಲ್ಕು ವೇದಗಳನ್ನು ಸ್ತುತಿಸಿ ಮೋಕ್ಷದ ದಾರಿ ತೋರಿಸುವ ವೇದಗಳಿಗನುಸಾರ ಆಚರಣೆ ಮಾಡಿ ಎಂದು ಹೇಳಿದ್ದನು. ಸಾರಾಂಶವೇನೆಂದರೆ, ಪಾರ್ಸಿ ಧರ್ಮಗ್ರಂಥ, ಹಾಗೆಯೇ ಪಾರ್ಸಿ ಮತ್ತು ಅರಬಿ ಭಾಷೆಗಳಲ್ಲಿ ಹಿಂದ್ ಎಂಬ ಶಬ್ದವು ನಿಂದಾಸೂಚಕವಂತೂ ಅಲ್ಲವೇ ಅಲ್ಲ, ತದ್ವಿರುದ್ಧ ಅದು ಗೌರವಾನ್ವಿತವಾಗಿದೆ.

೧. ಮೇರುತಂತ್ರ : ಎಂಟನೇ ಶತಮಾನದಲ್ಲಿ ರಚಿಸಲಾದ ಈ ಶೈವ ಗ್ರಂಥದಲ್ಲಿ ‘ಹಿಂದೂ ಶಬ್ದದ ವ್ಯಾಖ್ಯೆಯನ್ನು ಮುಂದಿನಂತೆ ಮಾಡಿದ್ದಾರೆ. ಹಿನ್ದು ಧರ್ಮ ಪ್ರಲೋಪ್ತಾರೌ ಜಾಯನ್ತೇ ಚಕ್ರವರ್ತಿನಃ | ಹೀನಶ್ಚ ದೂಷಯಪ್ಯೇವ ಸ ಹಿನ್ದುರಿತ್ಯುಚ್ಯತೇ ಪ್ರಿಯೇ || - ಮೇರುತಂತ್ರ
ಅರ್ಥ : ಹೇ ಪ್ರಿಯೇ, ಹಿಂದೂ ಧರ್ಮವನ್ನು ಲುಪ್ತಗೊಳಿಸುವ ಚಕ್ರವರ್ತಿ ರಾಜರು ಈಗ ಉತ್ಪನ್ನವಾಗುತ್ತಿದ್ದಾರೆ. ಹೀನ ಕರ್ಮ ಮತ್ತು ಗುಣಗಳನ್ನು ತ್ಯಾಗ ಮಾಡುವವನಿಗೆ ಹಿಂದೂ ಎನ್ನಲಾಗುತ್ತದೆ.

೨. ಶಬ್ದಕಲ್ಪದ್ರುಮ : ಪಾಣಿನೀಯ ವ್ಯಾಕರಣಕ್ಕನುಸಾರ ಹಿಂದೂ ಶಬ್ದದ ವ್ಯುತ್ಪತ್ತಿಯನ್ನು ಮುಂದಿನಂತೆ ನೀಡಲಾಗಿದೆ. ಹೀನಂ ದುಷಯತಿ ಇತಿ ಹಿನ್ದು ಜಾತಿ ವಿಶೇಷಃ | ಅರ್ಥ : ಕೆಟ್ಟ ಗುಣಗಳನ್ನು ಬಿಟ್ಟು ಮತ್ತು ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವವನೇ ಹಿಂದೂ ಎನ್ನುತ್ತಾರೆ.

ಭಾರತೀಯ ಸಂವಿಧಾನ ಮತ್ತು ಹಿಂದೂ ವಿವಾಹ ಕಾಯ್ದೆ - ೧೯೫೫ಕ್ಕನುಸಾರ ಹಿಂದೂ ಎಂದರೆ ಯಾರು?

ಭಾರತೀಯ ಸಂವಿಧಾನದ ಕಲಂ ೨೫ರಲ್ಲಿ ಹಿಂದೂ ಅಂತರ್ಗತ ಸಿಖ್, ಜೈನ ಮತ್ತು ಬೌದ್ಧರು ಬರುತ್ತಾರೆ ಎಂದು ಸ್ಪಷ್ಟೀಕರಣವನ್ನು ಕೊಡಲಾಗಿದೆ. ಅದಕ್ಕೂ ಮುಂದೆ ಹೋಗಿ ಹಿಂದೂ ವಿವಾಹ ಕಾಯ್ದೆ - ೧೯೫೫ರ ಪ್ರಕಾರ ಹಿಂದೂ ಎಂದರೆ ವೀರಶೈವ, ಲಿಂಗಾಯತ, ಜೈನ, ಬೌದ್ಧ ಮತ್ತು ಸಿಖ್ಖರು ಧರ್ಮತಃ ಹಿಂದೂಗಳಾಗಿದ್ದಾರೆ. 

ಭಾರತದಲ್ಲಿನ ಯಾವ ವ್ಯಕ್ತಿಗಳು ಮುಸಲ್ಮಾನ, ಕ್ರೈಸ್ತ, ಪಾರ್ಸಿ ಮತ್ತು ಜ್ಯೂಗಳಾಗಿಲ್ಲವೋ, ಅವರೆಲ್ಲ ಹಿಂದೂಗಳಾಗಿದ್ದಾರೆ. ಹಾಗಾಗಿ ಹಿಂದೂ ಶಬ್ದವು ಭಾರತದ ಹಿಂದೂ ಧರ್ಮದ ಶಬ್ದವೇ ಆಗಿದೆ. ಪ್ರತಿಯೊಬ್ಬ ಹಿಂದೂ ಸಹ ಹೆಮ್ಮೆಯಿಂದ ನಾನೊಬ್ಬ ಹಿಂದೂ ಎಂದು ಹೇಳಬೇಕಾಗಿದೆ.

ಸಂಕಲನ :- ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ. ದೂ. ಕ್ರ. 7204082609

(ಆಧಾರ : ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ ‘ಹಿಂದೂ ರಾಷ್ಟ್ರ : ಆಕ್ಷೇಪ ಮತ್ತು ಖಂಡನೆ’)

Read More Articles