ಪಿತೃಪಕ್ಷದ ಆಚರಣೆ ಮತ್ತು ಮಹತ್ವ

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹು ಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು. ಭಾದ್ರಪದ ಮಾಸದ ಕೃಷ್ಣಪಕ್ಷಕ್ಕೆ ಪಿತೃಪಕ್ಷ ಎನ್ನುತ್ತಾರೆ. ಈ ಪಕ್ಷಕ್ಕೆ ಮಹಾಲಯ ಪಕ್ಷ, ಮಹಾಲಯ ಅಮಾವಾಸ್ಯೆ, ಅಪರ ಪಕ್ಷವೆಂದು ಕರೆಯುತ್ತಾರೆ. ಪಿತೃಪಕ್ಷವು ಹಿಂದೂ ಚಾಂದ್ರಮಾನ ಆಚರಣೆ ಮತ್ತು ಮಹತ್ವ ತಿಂಗಳಾದ ಭಾದ್ರಪದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುತ್ತದೆ. ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ಆತ್ಮವು ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಭೂಮಿಯಲ್ಲಿ ಮರಣ ಹೊಂದಿರುವವರ ಆತ್ಮವನ್ನು ಯಮಲೋಕಕ್ಕೆ ಬರಮಾಡಿಕೊಳ್ಳುವಾಗ ಅಲ್ಲಿ ಈ ಆತ್ಮದ ಪೂರ್ವಜರ ಪೈಕಿ ಮೊದಲಿನವರ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ ಎಂಬ ಪ್ರತೀತಿ ಇದೆ. ಆದ್ದರಿಂದ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಆತ್ಮಗಳು ಮಾತ್ರ ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಮಾತ್ರ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯವಿದೆ. ಪಿತೃಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿ ಪ್ರವೇಶಿಸುವಲ್ಲಿಂದ ನಂತರದ ರಾಶಿಗೆ ಹೋಗುವವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತವೆ ಎಂಬ ನಂಬಿಕೆ ಇದೆ. ‌ಮಹಾಭಾರತದ ನಾಯಕರಲ್ಲಿ ಒಬ್ಬನಾದ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅವರಿಗೆ ತಿನ್ನಲು ಏನೂ ಸಿಗುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳು ಮಾತ್ರ ಕಾಣಸಿಗುತ್ತವೆ. ಜೀವಿತಾವಧಿಯಲ್ಲಿ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯ ದಾನ ಮಾಡಿದರೂ ಪೂರ್ವಜರಿಗೆ ಶ್ರಾದ್ಧ ಮಾಡಿ ಆಹಾರ ಕೊಡದ ಕಾರಣ ಈ ಅವಸ್ಥೆ ಎಂಬುದು ಅರಿವಾಯಿತು.

Your Image Ad

ಈ ಲೋಪ ಸರಿಪಡಿಸಲು ಅಂದರೆ ಪೂರ್ವಜರನ್ನು ಆರಾಧಿಸಿ ಅವರಿಗೆ ಶ್ರಾದ್ಧ, ಊಟ, ತಿಂಡಿ, ನೀರನ್ನು ಕೊಡುವುದು ವಾಡಿಕೆಯಾಗಿ ಬಂದಿದೆ. ಪಿತೃ ಋಣವನ್ನು ಮನುಷ್ಯ ಈ ರೂಪದಲ್ಲಿ ಈ ಪಕ್ಷದಲ್ಲಿ ತೀರಿಸುತ್ತಾ ಬರುತ್ತಿದ್ದಾನೆ.

Your Image Ad

‌ ‌ ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು

ಈ ಮಾತನ್ನು ಕಾತ್ಯಾಯನರು ಹೇಳಿದ್ದಾರೆ -
ನಭಸ್ಯಾಸ್ಯಾಪರೇ ಪಕ್ಷೇ ಶ್ರಾದ್ಧಂ ಕುರ್ಯಾದ್ ದಿನೇದಿನೇI
ಬ್ರಹ್ಮಪುರಾಣದಲ್ಲಿಯೂ ಈ ಮಾತಿದೆ -
ಆಶ್ವಯುಕೃಷ್ಣಪಕ್ಷೇ ತು ಶ್ರಾದ್ಧಂ ಕುರ್ಯಾದ್ ದಿನೇದಿನೇ I 
ಏಕಾದಶೀವ್ರತ ಸಕಲನಿಯಮಗಳಿಗಿಂತಲೂ ಮಹತ್ತ್ವದ್ದಾದ್ದರಿಂದ ವೈಷ್ಣವರು ಏಕಾದಶೀ ದಿವಸ ಶ್ರಾದ್ಧವನ್ನು ಮಾಡುವಂತಿಲ್ಲ. ಘಾತಚತುರ್ದಶಿಯಂದು ದುರ್ಮರಣ ಹೊಂದಿದವರಿಗೆ ಮಾತ್ರ ಶ್ರಾದ್ದ. ಈ ಎರಡು ದಿವಸ ಬಿಟ್ಟು ಎಲ್ಲಾ ದಿವಸಗಳಲ್ಲಿಯೂ ಶ್ರಾದ್ಧ ಮಾಡಬೇಕು, ಇಡಿಯ ಪಕ್ಷದಲ್ಲಿ ಶ್ರಾದ್ಧ ಮಾಡುವ ಶ್ರದ್ಧಾಳುಗಳು.
ಆದರೆ, ಈಗ ಪ್ರತೀದಿವಸ ಮಾಡುವವರು ಬಹಳ ಕಡಿಮೆ. ಮಹಾಲಯದಲ್ಲಿ ಒಂದು ದಿವಸ ಮಾತ್ರ ಪಕ್ಷವನ್ನು ಮಾಡಿಬಿಡುತ್ತಾರೆ. ಅಂಥವರೂ ಸಹ ಪ್ರತೀದಿವಸ ತರ್ಪಣವನ್ನು ಮಾತ್ರ ನೀಡಲೇ ಬೇಕು, ಏಕಾದಶಿಯನ್ನು ಹೊರತುಪಡಿಸಿ.
ಒಂದೇ ಬಾರಿ ಶ್ರಾದ್ಧ ಮಾಡುವವರು ಯಾವ ದಿವಸಗಳಲ್ಲಿ ಶ್ರಾದ್ಧ ಮಾಡಬಾರದು ಎನ್ನುವುದನ್ನು ವಸಿಷ್ಠರು ತಿಳಿಸಿದ್ದಾರೆ.

ನಂದಾಯಾಂ ಭಾರ್ಗವದಿನೇ ಚತುರ್ದಶ್ಯಾಂ ತ್ರಿಜನ್ಮಸು I
ಏಷು ಶ್ರಾದ್ಧಂ ನ ಕುರ್ವೀತ ಗೃಹೀ ಪುತ್ರಧನಕ್ಷಯಾತ್ ಈ

‌ 1. ಪ್ರತಿಪದಾ, ಷಷ್ಠೀ ಮತ್ತು ಏಕಾದಶಿಗಳಿಗೆ ನಂದಾತಿಥಿ ಎಂದು ಹೆಸರು. ಈ ತಿಥಿಗಳಂದು ಮಹಾಲಯ ಶ್ರಾದ್ಧ ಮಾಡಬಾರದು.

2. ಶುಕ್ರವಾರದಂದು ಮಹಾಲಯ ಶ್ರಾದ್ಧ ಮಾಡಬಾರದು.

3. ಘಾತಚತುರ್ದಶಿಯಂದು ಮಹಾಲಯ ಶ್ರಾದ್ಧ ಮಾಡಬಾರದು. ಅಪಘಾತ - ಕೊಲೆ - ಆತ್ಮಹತ್ಯೆಗಳಿಂದ ಸತ್ತವರಿಗೆ ಮಾತ್ರ ಘಾತಚತುರ್ದಶಿಯಂದು ಶ್ರಾದ್ಧ.

4. ರೋಹಿಣೀ, ರೇವತೀ ಮತ್ತು ಮಘಾ ಈ ನಕ್ಷತ್ರಗಳು ಇರುವ ದಿವಸ ಮಹಾಲಯ ಶ್ರಾದ್ಧವನ್ನು ಮಾಡಬಾರದು.

ಮೇಲೆ ಹೇಳಿದ ದಿವಸಗಳಲ್ಲಿ ಮಹಾಲಯ ಶ್ರಾದ್ಧ ಮಾಡಿದರೆ ಮಕ್ಕಳಿಗೆ ತೊಂದರೆಯುಂಟಾಗುತ್ತದೆ ಮತ್ತು ಸಂಪತ್ತು ನಾಶವಾಗುತ್ತದೆ ಎಂದು ವಸಿಷ್ಠರು ಮತ್ತು ವೃದ್ದಗರ್ಗರು ಇಬ್ಬರೂ ತಿಳಿಸಿದ್ದಾರೆ.

ಪ್ರಾಜಾಪತ್ಯೇ ಚ ಪೌಷ್ಣೇ ಚ ಪಿತ್ರ್ಯಕ್ರ್ಷೇ ಭಾರ್ಗವೇ ತಥಾ I
ಯಸ್ತು ಶ್ರಾದ್ಧಂ ಪ್ರಕುರ್ವೀತ ಸತ್ಯ ಪುತ್ರೋ ವಿನಶ್ಯತಿ II
‌ ಆಚರಣೆ ಎಲ್ಲಿ ಮಾಡಬೇಕು.

ಮನೆಯಲ್ಲಿ ತಿಲತರ್ಪಣ ನೀಡುವುದನ್ನು ಶಾಸ್ತ್ರಗಳು ನಿಷೇಧಿಸಿವೆ. ಭಾನುವಾರ, ಶುಕ್ರವಾರ, ಭರಣಿ, ಕೃತಿಕಾ ಹಾಗೂ ಮಘಾ ನಕ್ಷತ್ರಗಳಿರುವ ದಿನಗಳಲ್ಲಿ ಕೂಡ ತಿಲತರ್ಪಣವನ್ನು ನಿಷೇಧಿಸಲಾಗಿದೆ. ಆದರೆ ಪಿತೃಪಕ್ಷದಲ್ಲಿ ಮಾತ್ರ ಯಾವುದೇ ನಿಷಿದ್ಧ ತಿಥಿ ವಾರ ನಕ್ಷತ್ರಗಳಿದ್ದರೂ ತಿಲತರ್ಪಣ ಮಾಡಬಹುದು.

ತರ್ಪಣಕ್ಕೆ ಉತ್ತಮ ಸ್ಥಳಗಳೆಂದರೆ ಪವಿತ್ರ ನದೀತೀರಗಳು ಹಾಗೂ ಗೋಕರ್ಣಾದಿ ತೀರ್ಥಕ್ಷೇತ್ರಗಳು. ಪಿತೃಪಕ್ಷದಲ್ಲಿ ಅವಶ್ಯವಾಗಿ ತರ್ಪಣದ ಅಧಿಕಾರವುಳ್ಳವರು ಗೋಕರ್ಣ, ಶ್ರೀರಂಗಪಟ್ಟಣ ಮುಂತಾದ ಕ್ಷೇತ್ರಗಳು ಅಥವಾ ಕಾವೇರಿ, ಗಂಗಾ ಇಂಥ ಪವಿತ್ರ ನದೀತೀರಗಳಲ್ಲಿ ಪಿತೃಗಳಿಗೆ ಪಿಂಡಪ್ರದಾನ, ತರ್ಪಣಾದಿಗಳನ್ನು ಅರ್ಪಿಸುವುದು ಉತ್ತಮ. ವಿವಾಹವಾಗಿ ಇನ್ನೂ ಒಂದು ವರ್ಷ ಮುಗಿಯದವರು ತರ್ಪಣ ಮಾಡಕೂಡದು.

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಭಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಆಚಾರ್ಯ ಶಂಕರರು ನುಡಿದಂತೆ ಪುನರಪಿ ಜನನಂ ಪುನರಪಿ ಮರಣಂ. ಹೀಗೆ ಎಷ್ಟು ಜನ್ಮ ತಾಳಿದರೂ ಸಹ ಮುಗಿಸಲಾಗದಷ್ಟು ಪಾಪವನ್ನು ಒಂದೇ ಜನ್ಮದಲ್ಲಿ ಸಂಪಾದಿಸಿಬಿಡುತ್ತೇವೆ. ಈ ಕಠಿಣ ಸಮಸ್ಯೆಗೆ ನಮ್ಮ ಶಾಸ್ತ್ರಗಳು ಸುಲಭ ಪರಿಹಾರ ನೀಡುತ್ತವೆ. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಗರುಡಪುರಾಣದಲ್ಲಿ ಭಗವಂತನು ನುಡಿಯುತ್ತಾನೆ: ‘ಯಾವನು ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುತ್ತಾನೋ ಅವನೇ ಪುತ್ರ’. ಆದುದರಿಂದ ಯಾವುದೇ ಜಾತಿಬೇಧವಿಲ್ಲದೆ ಕರ್ಮಾಕಾರ ಇದ್ದಲ್ಲಿ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಋಣ ತೀರಿಸಲೇಬೇಕು.

‌ಕಾಲ
ಇಂಥ ವಿಶೇಷ ಕರ್ತವ್ಯವನ್ನು ಪಾಲಿಸಬೇಕಾದ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಕಾಲ. ಯಾವ ಕಾಲದಲ್ಲಿ ಪಿತೃಗಳಿಗೆ ಸದ್ಗತಿ ನೀಡುವ ಕಾರ್ಯಗಳನ್ನು ಮಾಡಬೇಕು? ಸಾಮಾನ್ಯವಾಗಿ ವಾರ್ಷಿಕ ಶ್ರಾದ್ಧ ರೂಢಿಯಲ್ಲಿ ಇಟ್ಟುಕೊಂಡವರು ಮೃತರ ಶ್ರಾದ್ಧವನ್ನು ಅವರ ಮೃತಮಾಸದ ಆ ತಿಥಿಯಂದು ಪಿಂಡಗಳನ್ನು ಸಮರ್ಪಿಸಿ ಆಚರಿಸುತ್ತಾರೆ. ಆದರೆ ಅಂಥ ಸಮಯದಲ್ಲಿ ಶ್ರಾದ್ಧ ಮಾಡುವವರು ಪಿತೃ, ಪಿತಾಮಹ, ಪ್ರಪಿತಾಮಹ ಅಂದರೆ ತಂದೆ, ಅಜ್ಜ ಹಾಗೂ ಮುತ್ತಜ್ಜನಿಗೆ ಅಥವಾ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿಗೆ ಪಿಂಡಾದಿಗಳನ್ನಿಟ್ಟು ಶ್ರಾದ್ಧ ಮಾಡುತ್ತಾರೆ. ಆದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಮಾತ್ರ ಕುಟುಂಬದಲ್ಲಿ ಮೃತರಾದ ಪ್ರತಿಯೊಬ್ಬರಿಗೂ ತರ್ಪಣ ಕೊಡಬೇಕು. ಕಾರಣ ಮಾಸಗಳಲ್ಲಿ ಅತ್ಯಂತ ಭದ್ರಮಾಸ ಎಂದು ಕರೆಯಲ್ಪಡುವುದು ಈ ಭಾದ್ರಪದ. ಅದರಲ್ಲಿಯೂ ಕೃಷ್ಣಪಕ್ಷ ಪ್ರಾರಂಭಗೊಳ್ಳುವುದು ಉತ್ತರಭಾದ್ರ ನಕ್ಷತ್ರದಿಂದ. ಅಂದರೆ ಮನುಷ್ಯಜನ್ಮ ಮುಗಿಸಿದ ಉತ್ತರದಲ್ಲಿ ಆ ಆತ್ಮಕ್ಕೆ ಶಾಶ್ವತ ಭದ್ರಸ್ಥಾನವನ್ನು ಪಿತೃಲೋಕದಲ್ಲಿ ಸ್ಥಾಪಿಸಲು ಹಾಗೂ ಅವರಿಗೆ ತರ್ಪಣಾದಿಗಳನ್ನು ಕೊಟ್ಟು ಶುಭವನ್ನು ಪಡೆಯಲು ಈ ಪಕ್ಷ ಸೂಕ್ತ ಸಮಯ. ವರ್ಷಕ್ಕೊಮ್ಮೆ ಏಕೆ ಎಂಬುದು ಸಾಮಾನ್ಯರ ಅನುಮಾನ. ಶಾಸಗಳ ಪ್ರಕಾರ ಭೂಲೋಕದಲ್ಲಿ ವಾಸ ಮಾಡುವ ನಮ್ಮ ಒಂದು ವರ್ಷ ಪಿತೃಲೋಕದವರಿಗೆ ಒಂದು ದಿವಸ. ಹೀಗಾಗಿ ವರ್ಷಕ್ಕೊಮ್ಮೆ ಪಿತೃಪಕ್ಷದಲ್ಲಿ ಪೂರ್ವಿಕರನ್ನು ಆರಾಧಿಸಿದರೆ ಪ್ರತಿದಿನ ಪಿತೃಗಳನ್ನು ಆರಾಧಿಸಿದಂತೆ. ಇನ್ನು ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿಯೇ ಏಕೆ? ‘ನಿರ್ಣಯಸಿಂಧು’ ಗ್ರಂಥದಲ್ಲಿ ತಿಳಿಸಿದಂತೆ ‘ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷದಲ್ಲಿ ಪಿತೃಗಳು ಪ್ರತಿದಿನ ಅನ್ನ ಹಾಗೂ ನೀರನ್ನು ಬಯಸುತ್ತಾರೆ.'

ಇಲ್ಲಿ ಪಕ್ಷ ಎಂದರೆ ೧೫ ತಿಥಿಗಳು. ಅಲ್ಲಿಗೆ ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷ ಈ ಭಾದ್ರಪದ ಕೃಷ್ಣಪಕ್ಷ. ಆದುದರಿಂದ ಈ ಪಕ್ಷವನ್ನು ಪಿತೃಪಕ್ಷ ಎಂದು ಕರೆದಿದ್ದಾರೆ. ಆದುದರಿಂದ ಪಿತೃಗಳನ್ನು ತೃಪ್ತಿಪಡಿಸಲು ಅವರು ಬಯಸುವ ಅನ್ನವನ್ನು ಪಿಂಡಗಳ ಸಮರ್ಪಣೆ ಮೂಲಕ ಹಾಗೂ ಅವರು ಬಯಸುವ ನೀರನ್ನು ತರ್ಪಣಗಳ ಮೂಲಕ ನೀಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು.

‌ಆಚರಣಾ ಕ್ರಮಗಳು
ಈ ಪಕ್ಷದಲ್ಲಿ ಪಿತೃಗಳಿಗೆ ಯಾವ ವಿಧಾನವನ್ನು ಆಚರಿಸಬೇಕೆಂಬುದು ವರ್ಣಶ್ರಮಗಳನ್ನು ಆಧರಿಸಿ ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿ ಪದ್ಧತಿ ಭೇದಗಳು ಬಹಳವಾಗಿ ಕಂಡುಬರುವುದು. ಆದರೆ ‘ಶಾಸಾತ್ ರೂಢಿಃ ಗರೀಯಸೀ’ ಎಂಬ ಶಾಸವಾಕ್ಯದಂತೆ ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದುದನ್ನು ಬಿಡಬಾರದು. ವೇದಾಕಾರ ಇಲ್ಲದವರು ಪಿತೃಗಳಿಗೆ ಪ್ರಿಯವಾದ ಭಕ್ಷ್ಯಗಳನ್ನು ತಯಾರಿಸಿ ಮನೆಯ ದೇವರ ಮುಂದೆ ಬಾಳೆಎಲೆಗಳನ್ನು ಹರಡಿ ಅದರಲ್ಲಿ ಆ ಭಕ್ಷ್ಯಗಳನ್ನು ಬಡಿಸಬೇಕು. ಮನೆಯ ತುಂಬ ಧೂಪವನ್ನು ಹಾಕಿ ಪಿತೃಗಳನ್ನು ನೆನೆದು, ಅವರು ಈ ಎಲ್ಲ ಭಕ್ಷ್ಯಭೋಜ್ಯಗಳನ್ನು ಸ್ವೀಕರಿಸಿ ತಮ್ಮನ್ನು ಹರಸಬೇಕೆಂದು ಪ್ರಾರ್ಥಿಸಬೇಕು. ಯದ್ಭಾವಂ ತದ್ಭವತಿ ಎಂಬಂತೆ ಇದನ್ನೇ ಹಿರಿಯರಿಗೆ ಎಡೆ ನೀಡುವುದು ಎನ್ನುತ್ತಾರೆ. ಇದರಿಂದ ಪಿತೃಗಳು ತೃಪ್ತರಾಗುತ್ತಾರೆ. ತರ್ಪಣಗಳನ್ನು ಕೊಡುವಾಗ ಯಾರ‍್ಯಾರಿಗೆ ಮತ್ತು ಯಾರಿಗೆ ಮೊದಲು ತರ್ಪಣ ಕೊಡಬೇಕು ಇತ್ಯಾದಿಗಳ ಬಗ್ಗೆ ಶಾಸ್ತ್ರಗಳಲ್ಲಿ ಹೀಗೆ ತಿಳಿಸಲಾಗಿದೆ.

ಆದೌ ಪಿತಾ ತತೋ ಮಾತಾ ಸಪತ್ನೀ ಜನನೀ ತಥಾ |
ಮಾತಾಮಹಾಃ ಸಪತ್ನೀಕಾಃ ಹ್ಯಾತ್ಮಪತ್ನೀ ತತಃ ಪರಂ ||
ಸುತಭ್ರಾತೃಪಿತೃವ್ಯಾಶ್ಚ ಮಾತುಲಾಶ್ಚ ಸಭಾರ್ಯಕಾಃ |
ದುಹಿತಾ ಭಗಿನೀ ಚೈವ ದೌಹಿತ್ರೋ ಭಾಗಿನೇಯಕಃ ||
ಶ್ಯಾಲಕೋ ಭಾವುಕಶ್ಬೈವ ಶ್ವಶುರೋ ಗುರುಋತ್ವಿಜಾ |
ಏತೇ ಸ್ಯುಃ ಪಿತರಸ್ತೀರ್ಥೆ ತರ್ಪಣೇಚ ಮಹಾಲಯೇ ||

ಕುಟುಂಬದಲ್ಲಿ ಮೃತಪಟ್ಟವರಲ್ಲಿ ಕ್ರಮವಾಗಿ ಮೊದಲು ತಂದೆ, ತಾಯಿ, ಹೆಂಡತಿ, ಅತ್ತೆ, ಮಾವ, ಮಗ, ಸಹೋದರರು, ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಅವರ ಹೆಂಡತಿ, ತಾಯಿಯ ತಮ್ಮ ಅಥವಾ ಅಣ್ಣ, ಅವರ ಹೆಂಡತಿಯರು, ಮಗಳು, ಅಕ್ಕ, ತಂಗಿ ಹಾಗೂ ಅವರ ಮಕ್ಕಳಿಗೆ, ಭಾವ, ಮೈದುನ ಮುಂತಾದವರು ಹಾಗೂ ವಿಶೇಷವಾಗಿ ಗುರುಗಳು, ಕುಲಪುರೋಹಿತರು ಸೇರಿದಂತೆ ಯಾರು ನಮಗೆ ತಿಳಿದಂತೆ ಮೃತರಾಗಿದ್ದಾರೋ ಅವರಿಗೆ - ಹೀಗೆ ಸರ್ವರಿಗೂ ಕ್ರಮವಾಗಿ ತರ್ಪಣಗಳನ್ನು ಕೊಡಬೇಕು.

ಇನ್ನು ಅನಾರೋಗ್ಯ, ವೃದ್ಧಾಪ್ಯ ಇತ್ಯಾದಿ ಕಾರಣಗಳಿಂದಾಗಿ ಇಷ್ಟೆಲ್ಲ ವಿಸ್ತಾರವಾಗಿ ತರ್ಪಣಗಳನ್ನು ಮಾಡಲು ಅಶಕ್ತರಾದವರು ಸಂಕ್ಷಿಪ್ತವಾಗಿಯೂ ಆಚರಿಸಬಹುದು. ಹೇಗೆಂದರೆ,

ಆಬ್ರಹ್ಮಸ್ತಂಭಪರ‍್ಯಂತಂ ದೇವರ್ಷಿ ಪಿತೃಮಾನವಾಃ |
ತೃಪ್ಯಂತು ಪಿತರಃ ಸರ್ವೇ ಮಾತೃಮಾತಾಮಹಾದಯಃ ||
ಆತೀತ ಕುಲಕೋಟೀನಾಂ ಸಪ್ತದ್ವೀಪ ನಿವಾಸಿನಾಂ |
ಆಬ್ರಹ್ಮ ಭುವನಾಲ್ಲೋಕಾತ್ ಇದಮಸ್ತು ತಿಲೋದಕಮ್ ||

ಎಂದು ಹೇಳುತ್ತ ಮೂರು ಸಲ ಎಳ್ಳುನೀರು ಬಿಡಬೇಕು. ಸಾಮಾನ್ಯವಾಗಿ ಇದನ್ನು ಮನೆಯ ಮುಂದೆ, ತುಳಸಿ ಕಟ್ಟೆಯ ಹತ್ತಿರ ಮಾಡುವ ಸಂಪ್ರದಾಯ ಕೆಲವರಲ್ಲಿದೆ ಎಂಬುದು ಕೆಲವು ಧರ್ಮಶಾಸ್ತ್ರಜ್ಞರ ಅಭಿಪ್ರಾಯ.

ಈ ತರ್ಪಣಾದಿಗಳನ್ನು ಆಚರಿಸುವಾಗ ಶುದ್ಧತೆಗೆ ಪ್ರಾಮುಖ್ಯತೆ ನೀಡಬೇಕು. ಈ ಸಂದರ್ಭದಲ್ಲಿ ದರ್ಭೆಗೆ ಅತ್ಯಂತ ಆವಶ್ಯಕ ಸ್ಥಾನವಿದೆ. ದರ್ಭೆಯಿಂದ ತಯಾರಿಸಿದ ಪವಿತ್ರವನ್ನು ಉಂಗುರದ ಬೆರಳಿಗೆ ಧರಿಸಿಯೇ ತರ್ಪಣಾದಿಗಳನ್ನು ಕೊಡಬೇಕು. ಕರ್ಮ ಮಾಡುವವನು ದರ್ಭಾಸನದಲ್ಲಿ ಕುಳಿತುಕೊಳ್ಳಬೇಕು ಹಾಗೂ ಪಿಂಡ ಹಾಕಿ ಕರ್ಮಾಂಗ ಮಾಡುವವರು ದರ್ಭೆಯ ಮೇಲೆಯೇ ಪಿಂಡ ಪ್ರಧಾನ ಮಾಡಬೇಕು. ತರ್ಪಣಾದಿಗಳನ್ನು ಮಾಡುವವರು ಶುದ್ಧವಾದ ಸ್ಥಳ, ವಸ್ತ್ರ, ನೀರು, ಎಳ್ಳು ಹಾಗೂ ಅಕ್ಕಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ತರ್ಪಣದಲ್ಲಿ ಬಳಸುವ ಅಕ್ಕಿ ತುಂಡಾಗಿರಬಾರದು. ತರ್ಪಣ ಮಾಡುವ ಸ್ಥಳದಲ್ಲಿ ಉದುರಿದ ಕೂದಲು ಇತ್ಯಾದಿಗಳು ಇರಬಾರದು. ಪರಿಶುದ್ಧ ಮನಸ್ಸಿನಿಂದ ತರ್ಪಣಗಳನ್ನು ನೀಡಬೇಕು. ಮನೆಯಲ್ಲಿ ಹಿರಿಯರ ದಿನದ ಆಚರಣೆಯ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ, ಕೂಗುವುದು, ಕಿರುಚುವುದು ಮಾಡಬಾರದು. ಈ ಸಂದರ್ಭದಲ್ಲಿ ಘಂಟಾನಾದಕ್ಕೆ ನಿಷೇಧವಿದೆ.

‌ಘಾತ ಚತುರ್ದಶಿ
ಪಿತೃಪಕ್ಷದಲ್ಲಿ ಮಹಾಲಯ ಅಮಾವಾಸ್ಯೆಯ ಹಿಂದಿನ ತಿಥಿ ಅಂದರೆ ಚತುರ್ದಶಿಯಂದು ಘಾತ ಚತುರ್ದಶಿ ಎಂದು ಬಳಸುವ ಪದ್ಧತಿ ಹಾಗೂ ಶಾಸ್ತ್ರಾಧಾರವಿದೆ. ಶಾಸ್ತ್ರಾದಿಗಳಲ್ಲಿ ತಿಳಿಸಿದಂತೆ ಮರದಿಂದ ಬಿದ್ದು ಸತ್ತವರು; ವಿಷಪ್ರಾಶನ, ಲೋಹ, ವಿದ್ಯುತ್, ನೀರು, ಬೆಂಕಿ, ಶಸ್ತ್ರಾಸ್ತ್ರಗಳ ಘಾತ, ಪ್ರಾಣಿಗಳ ಆಕ್ರಮಣ ಇತ್ಯಾದಿಗಳಿಂದ ಪ್ರಾಣ ಕಳೆದುಕೊಂಡವರಿಗೆ ಮಹಾಲಯ ಅಮಾವಾಸ್ಯೆಯ ಮೊದಲು ಬರುವ ಚತುರ್ದಶಿಯಂದು ಪಿಂಡಾದಿ ಪ್ರದಾನ ಮಾಡಿ ಶ್ರಾದ್ಧ ಆಚರಿಸಬೇಕು. ಅದರಿಂದ ಅವರು ತೃಪ್ತರಾಗುತ್ತಾರೆ. ಕುಟುಂಬದಲ್ಲಿ ಯಾರಾದರೂ ಅಪಮೃತ್ಯುವಿಗೀಡಾಗಿದ್ದಲ್ಲಿ ಈ ತಿಥಿಯಂದು ಅವರಿಗೆ ಕಡ್ಡಾಯವಾಗಿ ತರ್ಪಣಾದಿಗಳನ್ನು ನೀಡಬೇಕು. ಹಾಗೆ ಮಾಡುವುದರಿಂದಾಗಿ ಕುಟುಂಬದಲ್ಲಿನ ಪ್ರೇತಬಾಧೆಗಳು ನಿವಾರಣೆಯಾಗುತ್ತವೆ.

‌ದಾನಗಳು
ಈ ಪಕ್ಷದಲ್ಲಿ ಪಿತೃಗಳ ತೃಪ್ತಿಗಾಗಿ ದಾನಗಳಿಗೆ ಮಹತ್ವವಿದೆ ಈರುಳ್ಳಿ-ಬೆಳ್ಳುಳ್ಳಿ ಇತ್ಯಾದಿ ತಮೋಗುಣ ಪ್ರಧಾನ ತರಕಾರಿ ಹೊರತುಪಡಿಸಿ ಬೇರೆ ತರಕಾರಿ, ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ತುಪ್ಪ, ಇತ್ಯಾದಿಗಳನ್ನು ಕುಂಬಳಕಾಯಿ ಸಹಿತ ದಾನ ಮಾಡಬೇಕು. ವಸ್ತ್ರ, ಗೋವು, ಹೊಸ ಕೊಡೆ, ಹೊಸ ಪಾದರಕ್ಷೆ ಇತ್ಯಾದಿಗಳ ದಾನವು ಕೂಡ ವಿಶೇಷ ಫಲಗಳನ್ನು ಹಾಗೂ ಪಿತೃಗಳಿಗೆ ತೃಪ್ತಿಯನ್ನು ಕೊಡುತ್ತದೆ ಎಂದು ಶಾಸಗಳು ತಿಳಿಸಿವೆ. ನಾವು ಕೊಡುವ ದಾನವು, ಅದನ್ನು ಪಡೆದವರು ಸಂತೋಷವಾಗಿ ಬಳಸುವಂತಿರಬೇಕು ಎಂಬುದು ಗಮನಿಸಬೇಕಾದ ಮುಖ್ಯ ಅಂಶ. ಅಶಕ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆ ಕೊಟ್ಟು ನಮಸ್ಕರಿಸಿದರೂ ಅದು ಶುಭಪ್ರದ.

ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ.

Read More Articles