ಗಡಿಭಾಗದ ಮಕ್ಕಳು ಕನ್ನಡ ಶಿಕ್ಷಣದಿಂದ ವಂಚಿತರಾಗಬಾರದು: ಜಿಲ್ಲಾಧಿಕಾರಿ ಎಂ.ಜಿ. ‌ಹಿರೇಮಠ

ಬೆಳಗಾವಿ: ಗಡಿಭಾಗದ ಮಕ್ಕಳು ಕನ್ನಡ ಶಿಕ್ಷಣದಿಂದ ವಂಚಿತರಾಗಬಾರದು. ಗಡಿಭಾಗದ ಮಕ್ಕಳು ಕನ್ನಡ ಶಿಕ್ಷಣ ಪಡೆಯುವ ಮೂಲಕ ಸರಕಾರದ ಸೌಲಭ್ಯಗಳನ್ನು ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಲಹೆ ನೀಡಿದರು.

promotions

ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ ಕಾರ್ಯಕ್ರಮದಡಿ ನಿಪ್ಪಾಣಿ ತಾಲ್ಲೂಕಿನ ಹಂಚಿನಾಳ ಕೆ.ಎಸ್. ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಸಂಚಾರದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

promotions

 

ಗಡಿಭಾಗದ ಸಮಸ್ಯೆಗಳನ್ನು ಅರಿತುಕೊಳ್ಳಲು ಹಂಚಿನಾಳ ಕೆ.ಎಸ್. ಗ್ರಾಮವನ್ನು ಆಯ್ಜೆ ಮಾಡಲಾಗಿದೆ. ಇಲ್ಲಿನ ಮಕ್ಕಳಿಗೆ ಕನ್ನಡ ಓದು-ಬರಹ ಕಲಿಯುವ ಆಸೆಯಿದೆ. ಅದಕ್ಕೆ ಅನುಗುಣವಾಗಿ ಶಿಕ್ಷಕರ ನೇಮಕ ಮಾಡಿಕೊಂಡು ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ನದಿಯಿಂದ ಹೊಲಗಳಿಗೆ ನೀರು ಒದಗಿಸುವ ಭರವಸೆ:

ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ಸಮೀಪದ ದೂಧಗಂಗಾ ನದಿಯಿಂದ ಹೊಲಗಳಿಗೆ ನೀರು ಒದಗಿಸಲು ಸಮಸ್ಯೆಯಾಗುತ್ತಿದೆ ಎಂದು ಜನರು ತಿಳಿಸಿದ್ದಾರೆ. ಈ ಬಗ್ಗೆ ನೀರಾವರಿ ಇಲಾಖೆಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದು ಹೊಲಗಳಿಗೆ ನೀರು ಒದಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಭರವಸೆ ನೀಡಿದರು.

ವಡ್ಡರ ಓಣಿ, ಹರಿಜನ‌ಕೇರಿ ಭೇಟಿ ನೀಡಿ ಜನರ ಅಹವಾಲು ಆಲಿಸಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ಉತ್ತಮ ಕೆಲಸವಾಗಿದೆ. ಅಂಗನವಾಡಿಯಲ್ಲಿ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕೆಲವು ಮಕ್ಕಳಿಗೆ ಕಣ್ಣಿನ ದೋಷ ಕಂಡುಬಂದಿದೆ. ಇದರ ಬಗ್ಗೆ ವೈಯಕ್ತಿಕ ಗಮನಹರಿಸಿ ಚಿಕಿತ್ಸೆ ಒದಗಿಸಲಾಗುವುದು. ಮನೆಗಳನ್ನು ಕಲ್ಪಿಸುವಂತೆ ಅನೇಕ ಕುಟುಂಬಗಳು ಮನವಿ ಮಾಡಿಕೊಂಡಿವೆ. ಗ್ರಾಮದ ವಸತಿ ರಹಿತರಿಗೆ ಆಶ್ರಯ ಯೋಜನೆ ಪಟ್ಟಿಯಲ್ಲಿ ಅಂತಹವರ ಹೆಸರುಗಳನ್ನು ಸೇರಿಸಿ ಎಲ್ಲರಿಗೂ ಸೂರು ಒದಗಿಸಲಾಗುವುದು ಎಂದು ತಿಳಿಸಿದರು.

ನೂತನ ಗ್ರಾಮ ಒನ್ ಕೇಂದ್ರದಲ್ಲಿ 101 ಜನರಿಗೆ ಎಬಿ.ಆರ್ಕೆ ಕಾರ್ಡುಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಗ್ರಾಮ ಒನ್ ಮೂಲಕ ಜನರ ಮನೆಬಾಗಿಲಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಆರೋಗ್ಯ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ಸ್ಥಳದಲ್ಲಿಯೇ ಎ.ಬಿ.ಆರ್.ಕೆ. ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Read More Articles