ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ - ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಆದಿಯಿಂದಲೂ ಸ್ತ್ರೀ ಸೃಷ್ಟಿಯ ಮೂಲ. ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ ಅವಳಲ್ಲಿ ಅನಂತವಾದ ಶಕ್ತಿ ಇದೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

promotions

ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಬೆಳಗಾವಿ ಜಿಲ್ಲಾ ಪ್ರಥಮ ಕದಳಿ ಸಮಾವೇಶದ ಅಧಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದರು.

promotions

ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಆದರೆ ಸ್ವಸಾಮರ್ಥ್ಯದಿಂದಲೇ ಮುಂದೆ ಬಂದ ಹಲವಾರು ಸ್ತ್ರೀಯರನ್ನು ನಾವು ಗುರುತಿಸಬಹುದಾಗಿದೆ. ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿಲಕ್ಷ್ಮೀಬಾಯಿ ಮುಂತಾದವರನ್ನು ಉದಾಹರಿಸಬಹುದು. ಅವರೆಲ್ಲ ತಾವೇ ಸ್ವತ: ಜನೋಪಯೋಗಿ ಕೆಲಸಗಳಲ್ಲಿ ತೊಡಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಭಾರತೀಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಅವರೊಬ್ಬ ಯಶಸ್ವೀ ರಾಜಕಾರಣಿಯಾಗಿದ್ದಲ್ಲಿ, ಅವರು ಹತ್ತು ವರ್ಷಗಳಿಗೂ ಮಿಕ್ಕು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಲ್ಲಿ, "ಸಂಸತ್ತಿನಲ್ಲಿರುವ ಏಕೈಕ ಗಂಡಸು ಇಂದಿರಾಗಾಂಧಿ" ಎಂದು ಕರೆಸಿಕೊಂಡಿದ್ದರೆ ಅದಕ್ಕೆ ಮೀಸಲಾತಿ ಕಾರಣವಲ್ಲ. ಅವರು ಪಡೆದಿದ್ದ ಶಿಕ್ಷಣ ಮತ್ತು ಅವರು ನಿಕಟವಾಗಿ ರಾಜಕೀಯದ ಒಳಹೊರಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆ ಕಾರಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಪುರಾಣ ಕಾಲದ 'ಆದಿಶಕ್ತಿ' ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ, ಸರ್ವಶಕ್ತಿಯನ್ನು ಮೆರೆದಿರುವುದನ್ನು ಕಾಣಬಹುದಾಗಿದೆ. ಹಿಂದೂ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಕೃತಿಗಳ ರಚನೆಗೆ ಸ್ತ್ರೀ ಕಾರಣೀಭೂತಳಾಗಿದ್ದಾಳೆ. ಹಲವು ಶಾಸ್ತ್ರಗಳಲ್ಲಿ ಈಕೆಯನ್ನು ಜಗಜ್ಜನನಿಯೆಂದು ಹೇಳಲಾಗುತ್ತದೆ.

ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ. ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ಮಾತಿದೆ. ಪ್ರಕೃತಿಗೂ - ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.

ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ ಎಂದರು.

ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ. ನಾಗರಿಕ ಸಮಾಜದಲ್ಲಿ ಮಹತ್ತರ ಬದಲಾವಣೆ ನಡೆಯುತ್ತಿದ್ದರೂ ಹೆಣ್ಣುಮಕ್ಕಳ ಶೋಷಣೆ ತಪ್ಪಿಸಲಾಗಿಲ್ಲ. ಬಲವಾದ ಕಾನೂನುಗಳ ನೆರವಿದ್ದರೂ ಪ್ರಸ್ತುತ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ ಎಂದು ವಿಷಾಧಿಸಿದರು.

ಈ ಸಮಯದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಡಾ.ಸುರೇಶ ಹನಗಂಡಿ, ಸವದತ್ತಿಯ ಕದಳಿ ವೇದಿಕೆ ಅಧ್ಯಕ್ಷೆ ವಿಜಯಾ ಹಂಪನ್ನವರ, ಕದಳಿ ವೇದಿಕೆ ಗೌರವಾಧ್ಯಕ್ಷೆ ರಾಜೇಶ್ವರಿ ಕವಟಗಿಮಠ, ಜಿಲ್ಲಾಧ್ಯಕ್ಷೆ ಪ್ರೇಮಾ ಅಂಗಡಿ, ಕದಳಿ ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಹಿರೇಮಠ, ಸುನಂದಾ ಎಮ್ಮಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Read More Articles